ಕಣಿವೆ, ಜು. ೧: ಕೊಡಗು ಜಿಲ್ಲೆಯ ಎರಡನೇಯ ಹಾಗೂ ನಿರ್ಲಕ್ಷಿತಗೊಂಡ ಜಲಾಶಯ ವಾದ ಚಿಕ್ಲಿಹೊಳೆ ಜಲಾಶಯ ಆರಿದ್ರಾ ಮಳೆಯ ನೀರಿನ ಹರಿವಿನಿಂದ ಬಹುತೇಕ ಭರ್ತಿಯಾಗಿದೆ.

ಕುಶಾಲನಗರ ತಾಲೂಕಿನ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ೦.೧೮ ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು ೨೧೩೭ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತಿದೆ.

ಕಳೆದ ಕೆಲ ದಿನಗಳಿಂದ ಚಿಕ್ಲಿಹೊಳೆ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ಇದೀಗ ಸಂಪೂರ್ಣ ಭರ್ತಿಯಾಗಿದೆ.

ಕಳೆದ ವರ್ಷದ ಮುಂಗಾರಿನಲ್ಲಿ ಮಳೆ ಕೈಕೊಟ್ಟ ಪರಿಣಾಮ ಜಲಾಶಯ ಭರ್ತಿಯಾಗಿರಲಿಲ್ಲ.

ಹಾಗಾಗಿ ಕಳೆದ ನಾಲ್ಕು ತಿಂಗಳ ಹಿಂದಿನ ಮಾರ್ಚ್ನಿಂದ ಮೇ ಮಾಸಾಂತ್ಯದ ವರೆಗೂ ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿಲ್ಲದೇ ಬಣಗುಟ್ಟಿತ್ತು.

ಇದು ಈ ಭಾಗದ ಕೃಷಿಕರಿಗೆ ತೋಟ ಮಾಲೀಕರಿಗೆ ಭಾರೀ ಆತಂಕ ಮೂಡಿಸಿತ್ತು.

ಆದರೆ ಈ ಬಾರಿ ಪೂರ್ವ ಮುಂಗಾರು ಕೈ ಕೊಟ್ಟರೂ ಕೂಡ ಮುಂಗಾರಿನ ಆರಿದ್ರಾ ಮಳೆಯಿಂದಾಗಿ ಜಲಾಶಯಕ್ಕೆ ಗಣನೀಯವಾದ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಕಿರಿದಾದ ಜಲಾಶಯ ಇದೀಗ ತನ್ನೊಡಲಲ್ಲಿ ಜಲವನ್ನು ತುಂಬಿಕೊAಡು ಕಂಗೊಳಿಸುತ್ತಿದೆ.

ಜಲಾಶಯದ ಹೆಚ್ಚುವರಿ ನೀರು ಜಲಾಶಯದಲ್ಲಿ ಅಳವಡಿಸಿರುವ ಸುರುಳಿಯಾ ಕಾರದ ಕೊಳವೆಯಲ್ಲಿ ಹೊರ ಚೆಲ್ಲುವ ಕ್ಷಣಗಳನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರು ಕಾತರದಿಂದ ಕಾದಿದ್ದಾರೆ.

ವರದಿ : ಕೆ.ಎಸ್.ಮೂರ್ತಿ