ಮಡಿಕೇರಿ,ಜೂ.೨೯: ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದಲ್ಲಿ ಇಂದು ವರುಣದೇವ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಅಗ್ನಿವೀರ್ ವಿಭಾಗದ ಆಯ್ಕೆ ಪ್ರಕ್ರಿಯೆ ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಿತು. ತಾ.೨೭ರಂದು ಮಳೆಯ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಆಯ್ಕೆ ಪ್ರಕ್ರಿಯೆ ಇಂದು ನಡೆದಿದ್ದು, ಸುಮಾರು ಮುನ್ನೂರಕ್ಕೂ ಅಧಿಕ ಮಂದಿ ಓಟದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅಗ್ನಿವೀರ್ ವಿಭಾಗಕ್ಕೆ ಆಯ್ಕೆ ಮಾಡುವ ಸಂಬAಧ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾ. ೨೭ ಹಾಗೂ ೨೮ರಂದು ಓಟದ ಪ್ರಕ್ರಿಯೆ ಸೇರಿದಂತೆ ಇತರ ಪ್ರಕ್ರಿಯೆಗಳ ಶಿಬಿರ ಏರ್ಪಡಿಸಲಾಗಿತ್ತು. ಆದರೆ, ತಾ.೨೭ರಂದು ವಿಪರೀತ ಮಳೆಯಿಂದಾಗಿ ಮೈದಾನ ಕೆಸರುಮಯವಾಗಿ ನಿಗದಿತ ಸಮಯದಲ್ಲಿ ಓಡಲಾಗದೆ ಕೇವಲ ಮೂರು ಮಂದಿ ಮಾತ್ರ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ಇಂದಿಗೆ ಮುಂದೂಡಲಾಗಿತ್ತು. ನಿನ್ನೆ ಕೂಡ ಮಳೆ ಇದ್ದುದರಿಂದ ಓಟದ ಪ್ರಕ್ರಿಯೆಯನ್ನು ಟರ್ಫ್ ಮೈದಾನದಲ್ಲಿ ನೆರವೇರಿಸಿ ಉಳಿದ ಪ್ರಕ್ರಿಯೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಿಸಲಾಗಿತ್ತು. ಇಂದು ಮಳೆ ಕಡಿಮೆ ಇದ್ದುದರಿಂದ ಮುಂದೂಡಲ್ಪಟ್ಟಿದ್ದ ಒಟದ ಪ್ರಕ್ರಿಯೆಯನ್ನು ಟರ್ಫ್ ಮೈದಾನದಲ್ಲಿ ಮುಂಜಾನೆಯಲ್ಲಿ ನೆರವೇರಿಸಿ ಉಳಿದೆಲ್ಲ ಪ್ರಕ್ರಿಯೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು.
ಓಟದ ಪ್ರಕ್ರಿಯೆಯಲ್ಲಿ ನಿಗದಿತ ಸಮಯದಲ್ಲಿ ಪೂರೈಸಿದವರಿಗೆ ದೇಹದಾರ್ಢ್ಯ, ವೈದ್ಯಕೀಯ ಸೇರಿದಂತೆ ಇತರ ಚಟುವಟಿಕೆಗಳ ಪರೀಕ್ಷೆ ಮಾಡಲಾಯಿತು. ಆಯ್ಕೆ ಸಂಬAಧ ಇನ್ನೂ ಕೂಡ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
?ಸಂತೋಷ್