ವೀರಾಜಪೇಟೆ, ಜೂ. ೨೯: ಪುರಸಭೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿ ಹಾಗೂ ಕಸ ವಿಲೇವಾರಿ ಸಮಸ್ಯೆ ಕುರಿತು ಶನಿವಾರ ನಡೆದ ಪುರಸಭೆಯ ಸಭೆಯಲ್ಲಿ ಚರ್ಚೆ ನಡೆದು ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ತೀರ್ಮಾನಿಸ ಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಸದಸ್ಯ ರಂಜಿ ಪೂಣಚ್ಚ ಪಟ್ಟಣದಲ್ಲಿ ಬೀದಿನಾಯಿಗಳ ಸಮಸ್ಯೆ ವಿಪರೀತವಾಗಿದ್ದು, ಕಸ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪೃಥ್ವಿನಾಥ್ ಪಟ್ಟಣ ವ್ಯಾಪ್ತಿಯಲ್ಲಿ ಕೆಲವು ಕಡೆಗಳಲ್ಲಿ ಕಸ ವಿಲೇವಾರಿ ಮಾಡುವ ಪುರಸಭೆಯ ವಾಹನಗಳಿಗೆ ಕಸವನ್ನು ನೀಡದೇ ಬಳಿಕ ರಸ್ತೆಯ ಬದಿಯಲ್ಲಿ ಸುರಿಯಲಾಗುತ್ತಿದೆ ಎಂದರು.
ಸದಸ್ಯ ಮಹಾದೇವ್ ಮಾತನಾಡಿ, ಪಟ್ಟಣದಲ್ಲಿ ನೆಲೆಸಿರುವ ಕೆಲ ವಿದ್ಯಾವಂತರೇ ರಸ್ತೆ ಬದಿಯಲ್ಲಿ ಕಸವನ್ನು ಸುರಿಯುತ್ತಿದ್ದು, ಈ ಬಗ್ಗೆ ಪುರಸಭೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪುರಸಭೆಯ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ ಅಳವಡಿಸಿ, ರಸ್ತೆ ಬದಿ ಕಸ ಸುರಿವವರಿಗೆ ದಂಡ ವಿಧಿಸುವುದರೊಂದಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿತು.
ಸದಸ್ಯೆ ಎಂ.ದೇಚಮ್ಮ ಮಾತನಾಡಿ, ಪುರಸಭೆಯ ಕಸ ವಿಲೇವಾರಿ ವಾಹನಗಳು ನಿತ್ಯ ನಿಗದಿತ ಸಮಯಕ್ಕೆ ನಿಗದಿತ ಪ್ರದೇಶಕ್ಕೆ ತಲುಪಬೇಕು. ಜೊತೆಗೆ ಬೆಟ್ಟ ಪ್ರದೇಶವಾಗಿರುವ ನೆಹರುನಗರ, ಅರಸುನಗರ ಮತ್ತಿತರ ಕಡೆ ನಿಗದಿತ ಸ್ಥಳಗಳಲ್ಲಿ ಕಸ ವಿಲೇವಾರಿ ವಾಹನವನ್ನು ಕೆಲ ನಿಮಿಷಗಳ ಕಾಲ ನಿಲ್ಲಿಸುವ ಮೂಲಕ ಸಾರ್ವನಿಕರಿಗೆ ಕಸತಂದು ಹಾಕಲು ಸಮಯಾವಕಾಶ ನೀಡುವಂತೆ ಒತ್ತಾಯಿಸಿದರು.
ಪುರಸಭೆಯ ಆಡಳಿತಾಧಿಕಾರಿ ಯಾಗಿರುವ ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಮಾತನಾಡಿ, ಬೀದಿನಾಯಿಗಳ ನಿಯಂತ್ರಣಕ್ಕೆ ಹಾಗೂ ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ಶೌಚಾಲಯದ ನೀರನ್ನು ರಾಜ ಕಾಲುವೆಗೆ ಹರಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಆ.೧ರೊಳಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸದಸ್ಯೆ ತಬಸ್ಸುಂ ಮಾತನಾಡಿ, ದೊಡ್ಡಟ್ಟಿ ಚೌಕಿ ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಬಸ್ಗಳನ್ನು ನಿಗದಿತ ಸ್ಥಳಗಳಲ್ಲೇ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸದಸ್ಯ ಜಿ.ಜಿ.ಮೋಹನ್ ಪಟ್ಟಣದ ಪಾದಚಾರಿ ರಸ್ತೆಗಳ ದುಸ್ಥಿಯ ಬಗ್ಗೆ ಪ್ರಸ್ತಾಪಿಸಿದರು. ಬೀದಿದೀಪಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಹೇಳಿದರು. ಸಭೆಯಲ್ಲಿ ಸದಸ್ಯರಾದ ಸುನೀತ, ಮತೀನ್, ಸದಸ್ಯ ಮಹಮದ್ ರಾಫಿ, ಆಶಾ ಸುಬ್ಬಯ್ಯ, ಶಬರೀಶ್, ವಿನಾಂಕ್ ಕುಟ್ಟಪ್ಪ, ರಾಜೇಶ್, ಅನಿತಾ ಕುಮಾರ್, ರಜಿನಿಕಾಂತ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನಗರ ಠಾಣೆ ಎಸ್.ಐ ರವೀಂದ್ರ, ಇಂಜಿನಿಯರ್ ರಾಮಣ್ಣ ಗೌಡ, ಆರೋಗ್ಯ ಇಲಾಖೆ, ಪಶು ವೈದ್ಯಕೀಯ ಇಲಾಖೆ, ಸೆಸ್ಕ್, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.