ಸೋಮವಾರಪೇಟೆ, ಜೂ. ೨೯: ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಲಂಚದ ಬೇಡಿಕೆಯಿಡುತ್ತಿದ್ದಾರೆ. ಇದರಿಂದಾಗಿ ಬಡವರ ಕೆಲಸಗಳು ಆಗುತ್ತಿಲ್ಲ. ಇನ್ನಾದರೂ ಲಂಚಾವತಾರಕ್ಕೆ ಕಡಿವಾಣ ಹಾಕಿ ಎಂದು ಸದಸ್ಯರು ಒತ್ತಾಯಿಸಿದ ಘಟನೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಪ.ಪಂ. ಆಡಳಿತಾಧಿಕಾರಿಯೂ ಆಗಿರುವ ತಾಲೂಕು ತಹಶೀಲ್ದಾರ್ ನವೀನ್ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು, ಕಚೇರಿಯ ಲಂಚಾವತಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
‘ಫಾರಂ-೩ ಅಡಿಯಲ್ಲಿ ಅರ್ಜಿ ಸಲ್ಲಿಸಲು, ಖಾತೆ ವರ್ಗಾವಣೆ ಮಾಡಲು ಲಂಚ ಕೊಡಬೇಕಾ? ನಮ್ಮ ವಾರ್ಡ್ನ ಸಾರ್ವಜನಿಕ ರೋರ್ವರು ೫ ತಿಂಗಳ ಹಿಂದೆ ಅರ್ಜಿ ಸಲ್ಲಿಸಿದರೂ ಫಾರಂ-೩ ನೀಡಿಲ್ಲ. ಕಚೇರಿಗೆ ಆಗಮಿಸಿದರೆ ಏನೇನೋ ಕಾರಣ ನೀಡಿ ವಾಪಸ್ ಕಳಿಸುತ್ತಾರೆ. ಹಣ ನೀಡಿದವರ ಕೆಲಸ ಬೇಗ ಆಗುತ್ತದೆ’ ಎಂದು ಸದಸ್ಯೆ ನಾಗರತ್ನ ಅವರು ಚರ್ಚೆಗೆ ವೇದಿಕೆ ಒದಗಿಸಿದರು.
‘ದುಡ್ಡು ಇಲ್ಲದಿದ್ರೆ ಕಚೇರಿಯಲ್ಲಿ ಯಾವ ಕೆಲಸವೂ ಆಗುವುದಿಲ್ಲ; ಬಡವರು ಏನು ಮಾಡಬೇಕು?’ ಎಂದು ಸದಸ್ಯ ಬಿ.ಆರ್. ಮಹೇಶ್ ದನಿಗೂಡಿಸಿದರು. ‘ಈ ಹಿಂದಿನ ಸಭೆಯಲ್ಲಿಯೂ ಲಂಚದ ಬಗ್ಗೆ ಚರ್ಚೆಯಾಗಿದೆ. ಈವರೆಗೆ ಕಡಿವಾಣ ಬಿದ್ದಿಲ್ಲ. ಸಾರ್ವಜನಿಕರನ್ನು ಅಲೆದಾಡಿಸುವುದೂ ತಪ್ಪಿಲ್ಲ. ಇಲ್ಲಿ ಚರ್ಚೆಯಾಗೋದೇ ಒಂದು ಕಚೇರಿಯಲ್ಲಿ ನಡೆಯುತ್ತಿರೋದೇ ಮತ್ತೊಂದು’ ಎಂದು ಸದಸ್ಯ ಜೀವನ್ ಅಸಮಾಧಾನ ವ್ಯಕ್ತಪಡಿಸಿದರು.
‘ಕಚೇರಿಯಲ್ಲಿ ಹಲವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಲಂಚದ ಆಸೆಗೆ ಬಿದ್ದಿರುವ ಕೆಲವರು ಮಾತ್ರ ಹಣಕ್ಕೆ ಬೇಡಿಕೆಯಿಟ್ಟು, ಪಂಚಾಯಿತಿಯ ಮರ್ಯಾದೆ ತೆಗೆಯುತ್ತಿದ್ದಾರೆ. ಮುಖ್ಯಾಧಿಕಾರಿಗಳ ಹೆಸರು ಹೇಳಿಕೊಂಡು ಹಣ ಕೇಳುವವರೂ ಇದ್ದಾರೆ’ ಎಂದು ಸದಸ್ಯರುಗಳು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಮುಖ್ಯಾಧಿಕಾರಿ ನಾಚಪ್ಪ, ‘ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಯಾರೂ ಹಣ ನೀಡಬೇಕಾಗಿಲ್ಲ. ಲಂಚ ನೀಡುವುದು ಹಾಗೂ ಕೊಡುವುದು ತಪ್ಪು. ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಾಯಿ ಮಾತಿನಲ್ಲಿ ಆರೋಪಿಸಿದರೆ ಕ್ರಮ ಕೈಗೊಳ್ಳುವುದಾದರೂ ಹೇಗೆ? ಆದರೂ ಸಿಬ್ಬಂದಿಗಳ ಸಭೆ ಕರೆದು ಮತ್ತೊಮ್ಮೆ ಎಚ್ಚರಿಕೆ ನೀಡಲಾಗುವುದು. ಲಂಚದ ಬೇಡಿಕೆಯಿಟ್ಟರೆ ಸಾರ್ವಜನಿಕರು ನೇರವಾಗಿ ತಮಗೆ ದೂರು ನೀಡಬಹುದು’ ಎಂದರು.
ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕಾಮಗಾರಿಗಳು ಸ್ಥಗಿತಗೊಂಡಿವೆ. ಮೂಲ ಗುತ್ತಿಗೆದಾರ ಈವರೆಗೆ ಪಟ್ಟಣಕ್ಕೆ ಬಂದಿಲ್ಲ. ತುಂಡು ಗುತ್ತಿಗೆ ಪಡೆದಿರುವ ವ್ಯಕ್ತಿ ಬೇಜ ವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ. ಇದರಿಂದಾಗಿ ಪಟ್ಟಣದ ಅಭಿವೃದ್ಧಿ ನಿಂತ ನೀರಾಗಿದೆ ಎಂದು ಸದಸ್ಯರುಗಳು ಆರೋಪಿಸಿದರು.
ವಾರದಲ್ಲಿ ಕನಿಷ್ಟ ಒಂದು ದಿನವಾದರೂ ಪ.ಪಂ.ಗೆ ಸರ್ವೆಯರ್ ಆಗಮಿಸಲು ಕ್ರಮ ವಹಿಸಬೇಕೆಂದು ಸದಸ್ಯೆ ಶೀಲಾ ಡಿಸೋಜ ಅವರು ಆಡಳಿತಾಧಿಕಾರಿಗಳ ಗಮನ ಸೆಳೆದರು.
ಸರ್ವೆಯರ್ ಇಲ್ಲದೇ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ ಎಂದರು. ಕಚೇರಿಯಲ್ಲಿ ಎಫ್ಡಿಎ, ಬಿಲ್ ಕಲೆಕ್ಟರ್, ಪೂರ್ಣ ಪ್ರಮಾಣದ ಇಂಜಿನಿಯರ್, ಕಂದಾಯ ನಿರೀಕ್ಷಕರ ಹುದ್ದೆ ಖಾಲಿಯಿದೆ. ಇದರಿಂದಾಗಿ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಮುಖ್ಯಾಧಿಕಾರಿ ನಾಚಪ್ಪ ಅವರು ಅಸಹಾಯಕತೆ ತೋಡಿಕೊಂಡರು.
ಸಿಬ್ಬAದಿ ಕೊರತೆಯ ಬಗ್ಗೆ ಚರ್ಚೆ ನಡೆಸುವಂತೆ ಈ ಹಿಂದೆಯೇ ಶಾಸಕರು ಹೇಳಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ನಾಮನಿರ್ದೇಶನ ಸದಸ್ಯ ಕಿರಣ್ ಹೇಳಿದರು. ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಅವರೊಂದಿಗೆ ಚರ್ಚಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.
ಪ್ರಸ್ತುತ ಪಂಚಾಯಿತಿಗೆ ಅಧ್ಯಕ್ಷರ ನೇಮಕವಾಗಿಲ್ಲ. ತಹಶೀಲ್ದಾರರೇ ಆಡಳಿತಾಧಿಕಾರಿಯಾಗಿದ್ದಾರೆ. ಈ ಹಿನ್ನೆಲೆ ವಾರದಲ್ಲಿ ಕನಿಷ್ಟ ಎರಡು ಬಾರಿಯಾದರೂ ಕಚೇರಿಗೆ ಭೇಟಿ ನೀಡಬೇಕು ಎಂದು ಸದಸ್ಯ ಮಹೇಶ್, ಮೃತ್ಯುಂಜಯ ಅವರುಗಳು ಗಮನ ಸೆಳೆದರು.
ಕಚೇರಿಯಲ್ಲಿ ಸಿಬ್ಬಂದಿಗಳು ಸಮಯ ಪಾಲನೆ ಮಾಡುತ್ತಿಲ್ಲ. ಬಯೋಮೆಟ್ರಿಕ್ನಲ್ಲಿ ಹಾಜರಾತಿ ಹಾಕುತ್ತಿಲ್ಲ. ಇವುಗಳ ಬಗ್ಗೆ ಆಡಳಿತಾಧಿಕಾರಿ ಗಮನ ಹರಿಸಬೇಕೆಂದು ಒತ್ತಾಯಿಸಲಾಯಿತು.
ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆಯಿಲ್ಲದೆ ಗಬ್ಬೆದ್ದು ನಾರುತ್ತಿದೆ. ಖಾಸಗಿ ಬಸ್ ನಿಲ್ದಾಣದ ಶೌಚಾಲಯ ನವೀಕರಣ ಹೆಸರಿನಲ್ಲಿ ಭಾರೀ ಅವ್ಯವಹಾರ ವಾಗಿದೆ. ಹಲವು ಬಾರಿ ಬಿಲ್ ಮಾಡಲಾಗಿದೆ. ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ನಾಮನಿರ್ದೇಶನ ಸದಸ್ಯ ಹೆಚ್.ಎ. ನಾಗರಾಜ್ ಒತ್ತಾಯಿಸಿದರು.
ಆನೆಕೆರೆ ಮುಂಭಾಗ ಭಾರೀ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಪೈಪ್ಲೈನ್ ಸೇರಿದಂತೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬಾರದು ಎಂದು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.
ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಶಾಸಕರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ಪಟ್ಟಣದ ಅಟಲ್ಜೀ ಕನ್ನಡ ಭವನದ ಮೇಲ್ಭಾಗ ಮಳೆ ನೀರಿನ ಸರಾಗ ಹರಿವಿಲ್ಲದೇ ಇರುವುದರಿಂದ ಬಸ್ ನಿಲ್ದಾಣದಲ್ಲಿ ಮಳೆ ನಿಂತರೂ ನೀರು ಸೋರುವುದು ನಿಲ್ಲುತ್ತಿಲ್ಲ; ಇದನ್ನು ಸರಿಪಡಿಸಬೇಕು. ಕ್ಲಬ್ ರಸ್ತೆಯಲ್ಲಿ ಖಾಲಿ ಉಳಿದಿರುವ ಮಳಿಗೆಗಳನ್ನು ಶೀಘ್ರ ಹರಾಜು ಮಾಡಬೇಕೆಂದು ಸದಸ್ಯ ಮಹೇಶ್ ಒತ್ತಾಯಿಸಿದರು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಸಂಜೀವ, ಸದಸ್ಯರುಗಳಾದ ಪಿ.ಕೆ. ಚಂದ್ರು, ಬಿ.ಸಿ. ವೆಂಕಟೇಶ್, ಮೋಹಿನಿ, ಜಯಂತಿ ಶಿವಕುಮಾರ್, ನಾಮ ನಿರ್ದೇಶನ ಸದಸ್ಯ ವಿನು, ಅಭಿಯಂತರ ವಿಜಯಕುಮಾರ್ ಅವರುಗಳು ಉಪಸ್ಥಿತರಿದ್ದರು.