ಸೋಮವಾರಪೇಟೆ, ಜೂ. ೨೬: ಪಟ್ಟಣದಿಂದ ಆಲೇಕಟ್ಟೆ ರಸ್ತೆ ಮೂಲಕ ಹಾನಗಲ್ಲು ಬಾಣೆ ಗ್ರಾಮ ಸಂಪರ್ಕ ರಸ್ತೆ ಕುಸಿಯುವ ಭೀತಿಯಲ್ಲಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುವ ಆತಂಕ ಸೃಷ್ಟಿಸಿದೆ.

ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಆಲೇಕಟ್ಟೆ ಬಳಿ ಈಗಾಗಲೇ ರಸ್ತೆ ಕುಸಿಯುತ್ತಿದೆ. ಕಳೆದ ಮಳೆಗಾಲದಲ್ಲಿ ಕುಸಿಯಲು ಆರಂಭಿಸಿದ ಮಣ್ಣಿನ ಬರೆಗೆ ತಾತ್ಕಾಲಿಕವಾಗಿಯೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆ ಇದೀಗ ರಸ್ತೆಯ ಅಂಚಿನಿAದ ಕೇವಲ ಅರ್ಧ ಅಡಿಯಲ್ಲಿ ಬರೆ ಕುಸಿತವಾಗುತ್ತಿದೆ.

ಈ ಪ್ರದೇಶ ಚೌಡ್ಲು ಗ್ರಾಮ ಪಂಚಾಯಿತಿಗೆ ಒಳಪಡುತ್ತಿದ್ದು, ಇದೇ ರಸ್ತೆ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಬಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಆಗಿದೆ. ಇದರೊಂದಿಗೆ ಹಾನಗಲ್ಲು ಬಾಣೆಯಲ್ಲಿ ೮೦ಕ್ಕೂ ಅಧಿಕ ಕುಟುಂಬಗಳಿದ್ದು, ಸೆಸ್ಕ್ನ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಲೈನ್‌ಮೆನ್ ಗಳು ಹಾಗೂ ಸಿಬ್ಬಂದಿಗಳ ವಸತಿ ಗೃಹವಿದೆ. ಇದರೊಂದಿಗೆ ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ಸಂಗ್ರಹಾಗಾರ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ.

ಈ ರಸ್ತೆಯು ಹಾನಗಲ್ಲು ಶೆಟ್ಟಳ್ಳಿ ಮೂಲಕ ಹಾನಗಲ್ಲು ಗ್ರಾಮ, ಯಡೂರು ಗ್ರಾಮ ಸಂಪರ್ಕದ ರಸ್ತೆಯಾಗಿಯೂ ಬಳಕೆಯಾಗುತ್ತಿದೆ. ಇಷ್ಟೇ ಅಲ್ಲದೇ ಹಾನಗಲ್ಲು ಬಾಣೆ, ಕಾನ್ವೆಂಟ್ ಬಾಣೆ, ಆಲೇಕಟ್ಟೆ ರಸ್ತೆ, ಚೌಡ್ಲು ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಯಾರಾದರೂ ಮೃತರಾದರೆ ಶವಸಂಸ್ಕಾರಕ್ಕೆ ಹಾನಗಲ್ಲು ಬಾಣೆಯಲ್ಲಿರುವ ಸಾರ್ವಜನಿಕ ರುದ್ರಭೂಮಿಗೆ ಸಾಗಿಸಬೇಕಿದೆ.

ಲೋಕೋಪಯೋಗಿ ಹಾಗೂ ಜಿ.ಪಂ. ಇಂಜಿನಿಯರಿAಗ್ ವಿಭಾಗಕ್ಕೆ ಒಳಪಟ್ಟಂತೆ ಈ ರಸ್ತೆಯಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಕಳೆದ ಏಳೆಂಟು ವರ್ಷಗಳ ಹಿಂದೆ ಕೈಗೊಂಡ ಕಲ್ಲಿನ ತಡೆಗೋಡೆ ಕಟ್ಟುವ ಕಾಮಗಾರಿ ಸಂಪೂರ್ಣ ಕಳಪೆಯಾಗಿ, ನಿರ್ಮಾಣ ಹಂತದಲ್ಲಿಯೇ ಕುಸಿದುಬಿದ್ದ ನಂತರ ಹಾನಗಲ್ಲು ಬಾಣೆ ಸಂಪರ್ಕ ರಸ್ತೆಗೆ ಅಪಾಯ ಎದುರಾಗಿದೆ.

ಇದೀಗ ರಸ್ತೆ ಕುಸಿಯುತ್ತಿದ್ದು, ತಕ್ಷಣಕ್ಕೆ ಭಾರೀ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕಿದೆ. ಇದರೊಂದಿಗೆ ಅಧಿಕ ಭಾರ ಸಾಗಿಸುವ ವಾಹನಗಳ ಓಡಾಟ ವನ್ನೂ ನಿರ್ಬಂಧಿಸಬೇಕಿದೆ. ರಸ್ತೆಯ ಒಂದು ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ತುರ್ತು ಕ್ರಮಕೈ ಗೊಳ್ಳಬೇಕಿದೆ. ಆದರೆ ಸಂಬAಧಿಸಿದ ಲೋಕೋಪಯೋಗಿ ಹಾಗೂ ಜಿ.ಪಂ. ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ರಸ್ತೆ ಸಂಪೂರ್ಣ ಕುಸಿದು ಸಂಪರ್ಕ ಕಡಿತಗೊಂಡ ನಂತರ ಕೈ ಕೈ ಹಿಸುಕಿಕೊಳ್ಳುವುದಕ್ಕಿಂತ ಈಗಲೇ ಮುಂಜಾಗ್ರತಾ ಕ್ರಮ ಕೈಗೊಂಡು ರಸ್ತೆಯನ್ನು ಉಳಿಸಿಕೊಳ್ಳಲು ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ತಪ್ಪಿದ್ದಲ್ಲಿ ಸೋಮವಾರಪೇಟೆ-ಶಾಂತಳ್ಳಿ ಮುಖ್ಯರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.