ಸೋಮವಾರಪೇಟೆ, ಜೂ. ೨೬: ಭಾರೀ ಮಳೆ ಗಾಳಿಗೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಸುರಿದ ಮಳೆಗೆ ಸೂರ್ಲಬ್ಬಿ ಗ್ರಾಮದ ಮುದ್ದಂಡ ಗಪ್ಪು ಎಂಬವರ ಮನೆ ಸಮೀಪವಿದ್ದ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಮರ ಬಿದ್ದಿದ್ದರಿಂದ ಸೋಮವಾರಪೇಟೆಯಿಂದ ಸೂರ್ಲಬ್ಬಿ ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಸೇರಿದಂತೆ ಇತರ ವಾಹನಗಳ ಓಡಾಟಕ್ಕೆ ತಡೆಯಾಗಿತ್ತು. ಸ್ಥಳೀಯರು ಯಂತ್ರಗಳ ಸಹಾಯದಿಂದ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.