ಸುಂಟಿಕೊಪ್ಪ, ಜೂ. ೨೬: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸುವ ಮನವಿಯನ್ನು ಆದ್ಯತೆ ಮೇರೆ ಪರಿಗಣಿಸಲಾಗುವುದೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ತಾ.೨೪ ರಂದು ಸಂಜೆ ಸುಂಟಿಕೊಪ್ಪ ಆರೋಗ್ಯ ಕೇಂದ್ರಕ್ಕೆ ಮಡಿಕೇರಿ ಕ್ಷೇತ್ರದ ಶಾಸಕರು ಹಾಗೂ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಮುಖ್ಯ ಬೇಡಿಕೆಗಳಾದ ರಾತ್ರಿ ಪಾಳಯದ ವೈದ್ಯರು ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮತ್ತು ಒಟ್ಟಾರೆಯಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂಬುದನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದೆಂದು ಹೇಳಿದ ಆರೋಗ್ಯ ಸಚಿವರು, ಸ್ಥಳೀಯವಾಗಿ ವೈದ್ಯರು ಲಭ್ಯವಿದಲ್ಲಿ ಅವರನ್ನು ತಕ್ಷಣ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು, ಈಗಾಗಲೇ ಕುಶಾಲನಗರದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ. ಸೋಮವಾರಪೇಟೆಯಲ್ಲಿ ೩ ಮಂದಿ ತಜ್ಞ ವೈದÀ್ಯರನ್ನು ನೇಮಿಸಿಕೊಳ್ಳಲು ಅನುಮತಿ ಪಡೆಯಲಾಗಿದೆ. ಅದಷ್ಟು ಶೀಘ್ರವಾಗಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸಚಿವರ ಮೂಲಕ ಸರಕಾರದೊಂದಿಗೆ ವ್ಯವಹರಿಸಲಾಗುವುದೆಂದು ಭರವಸೆ ನೀಡಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಸುಂಟಿಕೊಪ್ಪ ಪ್ರಾಥಮಿಕ ಜನಸಂಖ್ಯೆಗೆ ಅನುಗುಣವಾಗಿ ಮೇಲ್ದರ್ಜೆಗೇರಬೇಕಾಗಿದೆ. ಈ ಆಸ್ಪತ್ರೆಯು ಸುತ್ತಮುತ್ತಲಿನ ೭ ಗ್ರಾಮ ಪಂಚಾಯಿತಿಗಳ ಜನತೆಯ ಆರೋಗ್ಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಧಾರವಾಗಿದೆ. ಇಲ್ಲಿ ವೈದ್ಯರ ಕೊರತೆ, ಹೆಚ್ಚಿನ ಚಿಕಿತ್ಸೆ ಅಲಭ್ಯತೆ, ಔಷಧಿಗಳ ಅಲಭ್ಯತೆ, ಮರಣೋತ್ತರ ಪರೀಕ್ಷೆ ನಡೆಯದಿರುವುದು ಇಲ್ಲಿನ ಸಮಸ್ಯೆಗಳಾಗಿದ್ದು, ಇದನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕಾಗಿದೆ ಎಂದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮತ್ತು ಸದಸ್ಯರು ಸಚಿವರಿಗೆ ಮನವಿ ಆರ್ಪಿಸಿ ಈ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಬೇಕಾದ ಅವಶ್ಯಕತೆಯನ್ನು ಮನದಟ್ಟು ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಸುಂಟಿಕೊಪ್ಪ ಪಟ್ಟಣದ ಮಧ್ಯಭಾಗದಲ್ಲಿ ರಾಷ್ಟಿçÃಯ ಹೆದ್ದಾರಿ ೨೭೫ ಹಾದು ಹೋಗಿದೆ. ಅದೇ ರೀತಿ ಚೆಟ್ಟಳ್ಳಿ ಮಾದಾಪುರ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಹೆಚ್ಚಳದ ಹಿನ್ನೆಲೆಯಲ್ಲಿ ವಾಹನ ಸಂಖ್ಯೆ ಹೆಚ್ಚಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಪರಿಸ್ಥಿತಿಯ ವಾಸ್ತವ ಚಿತ್ರಣವನ್ನು ಸಚಿವರಿಗೆ ಮನದಟ್ಟು ಮಾಡಿ ಪಂಚಾಯಿತಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿದರು.

ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿ, ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ವ್ಯಾಪ್ತಿಯಲ್ಲಿ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿತರಾಗಿದ್ದಾರೆ. ಆದರೆ ಸಂಜೆ ೪ ಗಂಟೆಯ ಬಳಿಕ ಇಲ್ಲಿ ವೈದ್ಯರು ಇಲ್ಲದೆ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆಯು ಇಲ್ಲದಂತಾಗುತ್ತಿರುವುದು ವಿಷಾದನೀಯ. ಇವೆಲ್ಲವುಗಳಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವುದೇ ಪರಿಹಾರ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಎಂ.ಎ.ಉಸ್ಮಾನ್ ಹಾಗೂ ರಫೀಕ್‌ಖಾನ್ ಮಾತನಾಡಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯು ಸೇರಿದಂತೆ ಸಿಬ್ಬಂದಿಗಳ ಕೊರತೆಯ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿದರು.

ಈ ಸಂದರ್ಭ ಡಿಎಚ್‌ಓ ಡಾ.ಸತೀಶ್‌ಕುಮಾರ್, ತಾಲೂಕು ಟಿಎಚ್‌ಓ ಡಾ.ಇಂದೂದರ, ತಾಲೂಕು ದಂಡಾಧಿಕಾರಿ ಕಿರಣ್ ಗೌರಯ್ಯ, ಆಡಳಿತಾಧಿಕಾರಿ ಡಾ.ಚೇತನ್‌ಕುಮಾರ್, ಪ್ರಾಥಮಿಕ ವೈದ್ಯಾಧಿಕಾರಿ ಸಮ್ನಾ, ಪಂಚಾಯಿತಿ ಸದಸ್ಯರುಗಳಾದ ಶಬ್ಬೀರ್, ಸಬಾಸ್ಟಿನ್, ಸೋಮನಾಥ್, ರೇಷ್ಮ, ಮಾಜಿ ಅಧ್ಯಕ್ಷರುಗಳಾದ ಕೆ.ಇ. ಕರೀಂ, ರೋಸ್‌ಮೇರಿ ರಾಡ್ರಿಗಸ್, ಮರಿಯ, ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್, ಮಾಜಿ ಜಿ.ಪಂ. ಸದಸ್ಯೆ ಭಾನುಮತಿ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಪಕ್ಷದ ಹಿರಿಯ ಮುಖಂಡ ಎಂ.ಎ. ವಸಂತ, ಮತ್ತಿತರರು ಇದ್ದರು.