ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
ಬೆಂಗಳೂರು, ಜೂ. ೨೬: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬುಧವಾರ ವಜಾಗೊಳಿಸಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಆದೇಶವನ್ನು ಕಾಯ್ದಿಸಿದ್ದರು. ಇಂದು ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ವಿಶೇಷ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿರುವುದರಿಂದ ಪ್ರಜ್ವಲ್ ರೇವಣ್ಣ ಈಗ ಹೈಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಗಿದೆ.
ನಮ್ಮ ಧ್ವನಿ ಹತ್ತಿಕ್ಕಬೇಡಿ, ನಿಷ್ಪಕ್ಷಪಾತವಾಗಿ ವರ್ತಿಸಿ-ರಾಹುಲ್
ನವದೆಹಲಿ, ಜೂ. ೨೬: ಸಂಸತ್ತಿನಲ್ಲಿ ನಾವು ದೇಶದ ಜನರ ಧ್ವನಿಯಾಗಿ ಕುಳಿತಿದ್ದೇವೆ. ಆಡಳಿತ ಪಕ್ಷದ ಸದಸ್ಯರಂತೆ ವಿರೋಧ ಪಕ್ಷದ ಸದಸ್ಯರಿಗೆ ಕೂಡ ಜನರ ಸಮಸ್ಯೆಗಳು, ಆಶೋತ್ತರಗಳಿಗೆ ಧ್ವನಿಯಾಗಬೇಕು. ಜನರ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವ ಕೆಲಸ ನಾವು ಸಮರ್ಥವಾಗಿ ಮಾಡಬೇಕಾಗಿದೆ. ಹೀಗಾಗಿ ಸದನದಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಬೇಡಿ ಎಂದು ಸಂಸದ ರಾಹುಲ್ ಗಾಂಧಿ ಹೇಳಿದರು. ಎರಡನೇ ಅವಧಿಗೆ ಲೋಕಸಭಾಧ್ಯಕ್ಷರಾಗಿ ಓಂ ಬಿರ್ಲಾ ಅವರು ಆಯ್ಕೆಗೊಂಡ ನಂತರ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಪ್ರತಿಪಕ್ಷಗಳು ಭಾರತೀಯ ಜನರ ಧ್ವನಿಯನ್ನು ಗಮನಾರ್ಹವಾಗಿ ಪ್ರತಿನಿಧಿಸುತ್ತವೆ. ಸದನದಲ್ಲಿ ವಿರೋಧ ಪಕ್ಷದವರ ಧ್ವನಿಯನ್ನು ಪ್ರತಿನಿಧಿಸಲು ಅವಕಾಶ ನೀಡುವುದು ಬಹಳ ಮುಖ್ಯ ಎಂದು ಒತ್ತಿ ಹೇಳಿದರು. ನಮ್ಮ ಧ್ವನಿಯನ್ನು ಪ್ರತಿನಿಧಿಸಲು, ಮಾತನಾಡಲು, ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸಲು ನೀವು ನಮಗೆ ಅವಕಾಶ ನೀಡುತ್ತೀರಿ ಎಂದು ನನಗೆ ವಿಶ್ವಾಸವಿದೆ ಎಂದರು. ಸದನವನ್ನು ಎಷ್ಟು ಸಮರ್ಥವಾಗಿ ನಡೆಸಲಾಗುತ್ತಿದೆ ಎಂಬುದು ಪ್ರಶ್ನೆಯಲ್ಲ, ಸದನದಲ್ಲಿ ಭಾರತದ ಧ್ವನಿಯನ್ನು ಕೇಳಲು ಎಷ್ಟರಮಟ್ಟಿಗೆ ಅವಕಾಶ ನೀಡುತ್ತೀರಿ ಎಂಬುದು ಮುಖ್ಯ ಎಂದರು.
ಶಾಸಕನಿಗೆ ಹನಿಟ್ರಾö್ಯಪ್ ಬೆದರಿಕೆ-ಇಬ್ಬರ ಬಂಧನ
ಮೈಸೂರು, ಜೂ. ೨೬: ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕರಿಗೆ ಹನಿಟ್ರಾö್ಯಪ್ ಮೂಲಕ ಬೆದರಿಕೆ ಹಾಕಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಶಾಸಕರು ನಕಲಿ ವೀಡಿಯೋ ಸೃಷ್ಟಿಸಿ ಕೋಟ್ಯಂತರ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು. ಶಾಸಕರ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಮೈಸೂರಿನ ಸಂತೋಷ್ ಹಾಗೂ ಪುಟ್ಟರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ವ್ಯಕ್ತಿಗಳು ಗಣ್ಯರನ್ನು ಟಾರ್ಗೆಟ್ ಮಾಡಿ, ಚಲನವಲನಗಳನ್ನು ಅವರು ಉಳಿದುಕೊಳ್ಳುವ ಹೊಟೇಲ್ಗಳಲ್ಲೇ ರೂಮ್ ಪಡೆದು ಅಲ್ಲಿಯೇ ಉಳಿದುಕೊಂಡು, ನಕಲಿ ವೀಡಿಯೋಗಳನ್ನು ಸೃಷ್ಟಿಸುತ್ತಿದ್ದರು ಬಳಿಕ ಆ ವೀಡಿಯೋವನ್ನು ವಿಐಪಿಗಳಿಗೆ ಕಳುಹಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಹಣ ನೀಡದಿದ್ದರೇ ವೀಡಿಯೋ ವೈರಲ್ ಮಾಡಿ ಜೊತೆಗೆ ಪೊಲೀಸರಿಗೆ ಕೊಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣ ಸ್ಫೋಟ ಬೆದರಿಕೆ
ಹುಬ್ಬಳ್ಳಿ, ಜೂ. ೨೬: ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರಿಗೆ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿದೆ. ವಿಮಾನ ನಿಲ್ದಾಣ ನಿರ್ದೇಶಕ ರೂಪೇಶ್ ಕುಮಾರ್ಗೆ ಅನಾಮಧೇಯ ವ್ಯಕ್ತಿಯೊಬ್ಬನಿಂದ ಇ-ಮೇಲ್ ಮೂಲಕ ಜೀವಬೆದರಿಕೆ ಸಂದೇಶ ಬಂದಿದೆ. ಲಾಂಗ್ ಲೀವ್ ಪ್ಯಾಲೆಸ್ತೇನ್ ಎಂಬ ಹೆಸರಿನ ಮೇಲ್ ಐಡಿಯಿಂದ ನಿರ್ದೇಶಕರ ಕಚೇರಿಯ ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿದೆ. ನಾವು ನಿಮ್ಮನ್ನು ನಾಶ ಮಾಡುತ್ತೇವೆ. ನೀವು ಮಾಡಿದ ಎಲ್ಲ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದು ಭಾವಿಸಿದ್ದೀರ. ಬೆಂಕಿಯಲ್ಲಿ ಎಸೆಯುತ್ತೇವೆ, ಉಸಿರುಗಟ್ಟಿ ಸಾಯುತ್ತೀರ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಸಂದೇಶ ಬಂದ ತಕ್ಷಣವೇ ರೂಪೇಶ್ ಅವರು ಈ ವಿಚಾರವನ್ನು ಟರ್ಮಿನಲ್ ಉಸ್ತುವಾರಿ ಪ್ರತಾಪ್ ಅವರ ಗಮನಕ್ಕೆ ತಂದಿದ್ದಾರೆ. ನಂತರ ಸಿಎಎಸ್ಒ, ಐಬಿ, ಬಿಡಿಡಿಎಸ್ ಮತ್ತು ಬಾಂಬ್ ನಿಷ್ಕಿçಯ ದಳಕ್ಕೆ ಮಾಹಿತಿ ರವಾನಿಸಿದ್ದು ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಡೆ ಕುಸಿದು ಒಂದೆ ಕುಟುಂಬದ ನಾಲ್ವರ ದುರ್ಮರಣ
ದಕ್ಷಿಣಕನ್ನಡ, ಜೂ. ೨೬: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಯಾಸಿರ್ (೪೫), ಪತ್ನಿ ಮರಿಯಮ್ಮ (೪೦) ಮತ್ತು ಮಕ್ಕಳಾದ ರಿಯಾನ ಮತ್ತು ರಿಫಾನ ಮೃತರು ಎಂದು ಗುರುತಿಸಲಾಗಿದೆ. ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯ ಗೋಡೆಯು ಯಾಸಿರ್ ಅವರ ಮನೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಮನೆ ಕುಸಿತವಾಗಿದೆ. ಅಗ್ನಿಶಾಮಕ ದಳದ ಪ್ರಕಾರ ಕೆಳಗಿರುವ ಮಣ್ಣು ಸಡಿಲಗೊಂಡಿದ್ದು, ಪಕ್ಕದ ಮನೆಯ ಮೇಲೆ ಗೋಡೆ ಕುಸಿದಿದೆ.