ಪೊನ್ನಂಪೇಟೆ, ಜೂ. ೨೨: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಯದುವೀರ್ ಒಡೆಯರ್ ಅವರನ್ನು ದಕ್ಷಿಣ ಕೊಡಗಿನ ಜೆಡಿಎಸ್ ಪ್ರಮುಖರ ನಿಯೋಗವು ಭೇಟಿ ಮಾಡಿತು. ಕೊಡಗಿನಲ್ಲಿ ಮೈತ್ರಿಯಾಗಿ ಪಕ್ಷಗಳನ್ನು ಸಂಘಟಿಸುವ ಬಗ್ಗೆ ಸಮಾಲೋಚನೆ ನಡೆಸಿದರು.
ಕೊಡಗು ಜಿಲ್ಲಾ ಜೆಡಿಎಸ್ ಮುಖಂಡ ಕೋತೂರಿನ ಕೆ.ಆರ್. ಸುರೇಶ್ ನೇತೃತ್ವದ ನಿಯೋಗ ಸಂಸದರನ್ನು ಅಭಿನಂದಿಸಿ ಸಂಸದರ ನಿಧಿಯಿಂದ ಕೊಡಗಿನಲ್ಲಿ ಕೈಗೊಳ್ಳಬೇಕಿರುವ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚಿಸಿತು. ಈ ವೇಳೆ ಮಾತನಾಡಿದ ಕೆ.ಆರ್. ಸುರೇಶ್, ಲೋಕಸಭಾ ಚುನಾವಣೆಯ ಗೆಲುವು ಮುಂಬರುವ ಜಿ.ಪಂ. ಮತ್ತು ತಾ. ಪಂ. ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಕಾರಿಯಾಗಲಿದೆ ಎಂದರು.
ಸಂಸದರಾದ ಯದುವೀರ್ ಒಡೆಯರ್ ಮಾತನಾಡಿ, ಮೈಸೂರು ಮತ್ತು ಕೊಡಗನ್ನು ಸಮಾನವಾಗಿ ಪರಿಗಣಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಪಕ್ಷ ಸಂಘಟನೆಗೂ ಆದ್ಯತೆ ನೀಡಲಾಗುವುದು ಎಂದರು.
ನಿಯೋಗದಲ್ಲಿ ಬಿಜೆಪಿ ಮುಖಂಡ ಎಸ್.ಎಂ. ಬಸಪ್ಪ, ಜೆಡಿಎಸ್ ಮುಖಂಡರಾದ ಕೆ.ಆರ್. ಸತೀಶ್, ವಿ.ಆರ್. ಪರಮೇಶ್, ಕೆ.ಬಿ. ಸುನಿಲ್, ವಿ.ಎಸ್. ಈಶ್ವರ, ವಿ.ಎಸ್. ಬಸವರಾಜು ಮತ್ತಿತರು ಹಾಜರಿದ್ದರು.