ಶನಿವಾರಸಂತೆ, ಜೂ. ೨೨: ವಿದ್ಯಾರ್ಥಿಗಳು ಪದವಿ ಗಳಿಸಿದ ನಂತರ ಉನ್ನತ ವ್ಯಾಸಂಗದ ಬಗ್ಗೆ ಆಲೋಚನೆ ಮಾಡುವುದರ ಜೊತೆಗೆ ಭವಿಷ್ಯದಲ್ಲಿ ಮಾಡುವ ಕೆಲಸ ಹಾಗೂ ವೃತ್ತಿಯ ಬಗೆಗೂ ಬದ್ಧತೆ ಹೊಂದಿರಬೇಕು ಎಂದು ಪಟ್ಟಣದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಿ. ಸುಜಲಾ ದೇವಿ ಅಭಿಪ್ರಾಯ ವ್ಯಕ್ತಪಡಿಸಿದರು,
ಸಮೀಪದ ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ನಡೆದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಪದವಿ ಪಡೆದ ನಂತರ ವಿದ್ಯಾರ್ಥಿ ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಮಾಡಬಹುದು. ಆದರೆ, ಆ ಉದ್ಯೋಗದಲ್ಲಿ ಬದ್ಧತೆ ಬೆಳೆಸಿಕೊಂಡರಷ್ಟೇ ಪಡೆದ ಪದವಿ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಅಪಮಾನ, ಅಡ್ಡಿ-ಆತಂಕ, ಸವಾಲುಗಳು ಬರುತ್ತವೆ. ಎಲ್ಲವನ್ನೂ ಆತ್ಮವಿಶ್ವಾಸದಿಂದ ಎದುರಿಸಿ ಮುಂದೆ ಸಾಗಬೇಕು ಎಂದರು.
ಉಪನ್ಯಾಸಕ ಹೆಚ್.ಎಂ. ವಿವೇಕ್ ಮಾತನಾಡಿ, ಪದವಿ ನಂತರ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಆ ಕ್ಷೇತ್ರವನ್ನು ಗೌರವಿಸಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು. ತಂದೆ-ತಾಯಿ ಜೊತೆಗೆ ಗುರುಗಳನ್ನು ಆದರ್ಶವಾಗಿ ಗೌರವಿಸಬೇಕು ಎಂದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊAಡರು.
ಉಪನ್ಯಾಸಕರಾದ ಮೋಹನ್ ಕುಮಾರ್, ಸುರೇಂದ್ರ, ಹೆಚ್.ಎಂ. ವಿವೇಕ್. ಟಿ.ಜೆ. ಶೋಭಾ, ಎಂ.ಎನ್. ಹರೀಶ್ ಕುಮಾರ್, ಎ.ಹೆಚ್. ಚಂದ್ರಕಾAತ್ ಹಾಜರಿದ್ದರು. ವಿದ್ಯಾರ್ಥಿನಿಯರಾದ ಚಲನ, ಸಾಧಿಕಾ, ಭಾನು ಕಾರ್ಯಕ್ರಮ ನಿರ್ವಹಿಸಿದರು.