ಸೋಮವಾರಪೇಟೆ, ಜೂ.೨೦: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಇನ್ನಿತರ ದಿನೋಪಯೋಗಿ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿನ ಬಿಜೆಪಿ ಕಚೇರಿಯಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು, ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಕೆಲಕಾಲ ವಾಹನಗಳ ಓಡಾಟಕ್ಕೆ ತಡೆಯೊಡ್ಡಿದರು.

ಈ ಸಂದರ್ಭ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು, ರಸ್ತೆ ತಡೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲ ಮಾಡದಂತೆ ಸೂಚನೆ ನೀಡಿದರು. ಆದರೂ ಮಾನವ ಸರಪಳಿ ಮುಂದುವರೆದ ಹಿನ್ನೆಲೆ ಕೆಲಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಪ್ರತಿಭಟನೆಯಲ್ಲಿದ್ದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಜೀವನದ ಮೇಲೆ ಚೆಲ್ಲಾಟವಾಡುತ್ತಿದೆ. ಇಂತಹ ಜನವಿರೋಧಿ ಸರ್ಕಾರ ಈವರೆಗೆ ಬಂದಿಲ್ಲ ಎಂದು ಆರೋಪಿಸಿದರು.

(ಮೊದಲ ಪುಟದಿಂದ) ಕಾಂಗ್ರೆಸ್ ಬಂದ ನಂತರ ಸರ್ಕಾರದ ಖಜಾನೆ ಖಾಲಿಯಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಜನರಿಂದ ಹಣ ವಸೂಲಿ ಮಾಡಲು ವಿದ್ಯುತ್, ಮದ್ಯ, ಬಸ್ ಟಿಕೆಟ್ ದರ, ಪೆಟ್ರೋಲ್, ಡೀಸೆಲ್, ಅಕ್ಕಿ, ನೀರಿನ ತೆರಿಗೆ ಸೇರಿದಂತೆ ದಿನೋಪಯೋಗಿ ವಸ್ತುಗಳ ಬೆಲೆಯನ್ನು ಏರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನಮ್ಮ ಬಿಜೆಪಿ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪೆಟ್ರೋಲ್ ಬೆಲೆಯನ್ನು ೫ ರೂಪಾಯಿ ಇಳಿಸಲಾಗಿತ್ತು. ಆದರೆ ಈಗಿನ ಸರ್ಕಾರ ಬೆಲೆ ಇಳಿಸುವುದಿರಲಿ; ಮೂರರಿಂದ ಮೂರೂವರೆ ರೂಪಾಯಿ ಹೆಚ್ಚಳ ಮಾಡಿದೆ ಎಂದು ದೂರಿದರು.

ಪೆಟ್ರೋಲ್-ಡೀಸೆಲ್ ಮೇಲಿನ ಬೆಲೆ ಏರಿಕೆಯಿಂದ ಬಸ್, ಆಟೋ, ಸರಕು ಸಾಗಾಣಿಕೆ, ಖಾಸಗಿ ವಾಹನಗಳ ಬಳಕೆ ಇನ್ನಷ್ಟು ದುಬಾರಿಯಾಗಿದೆ. ಪರಿಣಾಮವಾಗಿ ದಿನನಿತ್ಯ ಉಪಯೋಗಿಸಲ್ಪಡುವ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದರೊಂದಿಗೆ ಸ್ಟಾಂಪ್ ಪೇಪರ್, ಆಸ್ತಿ ನೋಂದಣಿಯೂ ಹೆಚ್ಚಳವಾಗಿದೆ. ರೈತರ ಬೆನ್ನ ಮೇಲೆ ಬರೆ ಎಳೆಯಲಾಗಿದೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ಜೀವನ ಸಾಗಿಸಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಮೂಲಕ ೨ ಸಾವಿರ ಹಣ ಬರುತ್ತಿಲ್ಲ. ಅಕ್ಕಿಯ ಹಣ ನೀಡುತ್ತಿಲ್ಲ, ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ, ಯುವ ನಿಧಿಯಂತೂ ಬರಲೇ ಇಲ್ಲ, ಅವೈಜ್ಞಾನಿಕ ಯೋಜನೆ, ಭ್ರಷ್ಟಾಚಾರದಿಂದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀರಿನಿಂದ ಹಿಡಿದು ಅಕ್ಕಿಯವರೆಗೂ ಬೆಲೆ ಏರಿಕೆ ಮಾಡಿದೆ. ಈ ಸರ್ಕಾರ ಜನ ವಿರೋಧಿ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಮತ್ತೊಂದಿಲ್ಲ. ಜನತೆಯ ಸಂಕಷ್ಟಗಳನ್ನು ಬಗೆಹರಿಸಲು ಬಿಜೆಪಿ ಸದಾ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದರು.

ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುವವರೆಗೆ ಬಿಜೆಪಿ ಪ್ರತಿಭಟನೆ ಮುಂದುವರೆಸಲಿದೆ. ಈಗಾಗಲೇ ಎರಡು ಹಂತಗಳಲ್ಲಿ ಪ್ರತಿಭಟನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ವಾರಕ್ಕೊಮ್ಮೆ ಬೆಲೆ ಏರಿಕೆಯ ಬಿಸಿ ಅನುಭವಿಸುವಂತಾಗಿದೆ. ಅಂತರರಾಷ್ಟಿçÃಯ ಮಟ್ಟದಲ್ಲಿ ತೈಲದರ ಏರಿಕೆಯಾಗದೇ ಇದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿದೆ. ಇದರ ಪ್ರತಿಕೂಲ ಪರಿಣಾಮ ಕೂಲಿ ಕಾರ್ಮಿಕನಿಂದ ಹಿಡಿದು ಎಲ್ಲಾ ವರ್ಗದ ಮಂದಿಯ ಮೇಲೆ ಬಿದ್ದಿದೆ. ಸ್ಥಳೀಯ ವ್ಯಾಪಾರಿಗಳನ್ನು ಬೈಯ್ಯುವ ಬದಲು ಬೆಲೆ ಏರಿಕೆಗೆ ಕಾರಣವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮುಂದುವರೆಸಬೇಕಿದೆ ಎಂದರು.

ಮಾಜಿ ಎಂ.ಎಲ್.ಸಿ. ಮೇದಪ್ಪ ಎಸ್.ಜಿ. ಮಾತನಾಡಿ, ಬೆಲೆ ಏರಿಕೆಯಿಂದ ದಿನನಿತ್ಯದ ಬದುಕು ದುಸ್ತರವಾಗಿದೆ. ಯಾರಿಗೂ ನೆಮ್ಮದಿ ಇಲ್ಲವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮವೊಂದರಲ್ಲೇ ೧೬೭ ಕೋಟಿ ಅವ್ಯವಹಾರವಾಗಿದೆ. ಇತರ ನಿಗಮಗಳಲ್ಲಿ ಇನ್ನೆಷ್ಟು ಭ್ರಷ್ಟಾಚಾರ ಆಗಿರಬಹುದು? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಎಂದಿಗೂ ಜನಪರವಾಗಿ ನಿಂತು ಹೋರಾಟ ಮಾಡುತ್ತದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳಾದ ಅನಿತಾ ಪೂವಯ್ಯ, ಲೋಕೇಶ್ವರಿ ಗೋಪಾಲ್, ಮಹೇಶ್ ಜೈನಿ, ಸಂಪತ್, ಸೋಮೇಶ್, ಅಭಿಮನ್ಯುಕುಮಾರ್, ಅಜೀಶ್‌ಕುಮಾರ್, ವಿ.ಕೆ. ಲೋಕೇಶ್, ಮನುಕುಮಾರ್ ರೈ, ಮಹೇಶ್ ತಿಮ್ಮಯ್ಯ, ಮೋಹಿತ್, ಕವಿತಾ ವಿರೂಪಾಕ್ಷ, ಹೆಚ್.ಕೆ. ಮಾದಪ್ಪ, ಬಿ.ಜೆ. ನಾಪಂಡ ಉಮೇಶ್, ಮಚ್ಚಂಡ ಪ್ರಕಾಶ್ ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.ವೀರಾಜಪೇಟೆ, ಜೂ. ೨೦: ತೈಲದ ಮೇಲಿನ ತೆರಿಗೆ ದರ ಹೆಚ್ಚಳ ವಿರೋಧಿಸಿ ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ಬಿಜೆಪಿ ಕಚೇರಿಯಿಂದ ಗಡಿಯಾರ ಕಂಬದವರೆಗೆ ಜಾಥಾ ಮೂಲಕ ತೆರಳಿ ಪ್ರತಿಭಟನೆ ನಡೆಸಲಾಯಿತು.

ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿ ‘ಇಳಿಸಿ ಇಳಿಸಿ ತೈಲ ಬೆಲೆ ಇಳಿಸಿ, ತೊಲಗಿಸಿ ತೊಲಗಿಸಿ ರಾಜ್ಯ ಸರಕಾರ ತೊಲಗಿಸಿ’, ‘ಬೇಕೇ ಬೇಕು ನ್ಯಾಯ ಬೇಕು, ಬೆಲೆ ಏರಿಕೆ ಮಾಡಿದ ರಾಜ್ಯ ಸರಕಾರಕ್ಕೆ ಧಿಕ್ಕಾರ’, ‘ಅಯ್ಯಯ್ಯೋ ಅನ್ಯಾಯ’ ಮೊದಲಾದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.

ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಕೆಲಕಾಲ ರಸ್ತೆ ತಡೆದು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜನರಿಗೆ ಹೊರೆ ಆಗುವ ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಬೆಲೆ ಹೆಚ್ಚಳ ವಾಪಸ್ ಪಡೆಯುವವರೆಗೂ ಬಿಜೆಪಿ ಹೋರಾಟ ಮುಂದುವರೆಯಲ್ಲ. ಬಿಜೆಪಿ ಈ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ. ಮುಖ್ಯಮಂತ್ರಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವವರೆಗೆ ಈ ಹೋರಾಟದಿಂದ ನಾವು ವಿಮುಖರಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದೆ ಕಂಗೆಟ್ಟು (ಮೊದಲ ಪುಟದಿಂದ) ಹೋಗಿರುವ ಕಾಂಗ್ರೆಸ್ ಸರಕಾರ ಹಣವನ್ನು ಸರಿದೂಗಿಸಲು ಸಾಮಾನ್ಯ ಜನರ ಕಿಸೆಗೆ ಕನ್ನ ಹಾಕುತ್ತಿರುವುದು ಖಂಡನಿಯ ಎಂದರು.

ಮಾಚಿಮAಡ ಸುವಿನ್ ಗಣಪತಿ ಮಾತನಾಡಿ ರಾಜ್ಯದಲ್ಲಿ ಹಣಕಾಸು ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸಾಕ್ಷಿ, ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿ ತೈಲ ಬೆಲೆಗಳನ್ನು ಏರಿಕೆ ಮಾಡಿದೆ. ಲೋಕಸಭೆ ಚುನಾವಣೆ ಸೋಲಿನ ಹತಾಶೆ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯಿಂದ ಆಡಳಿತವನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಬಂಡತನದಿAದ ಮಾತನಾಡುವ ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡಲಾಗದಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪದ್ಮಿನಿ ಸೋಮಯ್ಯ ಮಾತನಾಡಿ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ, ವಿದ್ಯುತ್ ದರವನ್ನು ಏರಿಸಲಾಗಿದೆ, ಇವರಿಂದ ಉತ್ತಮ ಆಡಳಿತ ನಿರೀಕ್ಷಿಸಲಾಗುವುದಿಲ್ಲ. ತೈಲಬೆಲೆ ಏರಿಕೆ ಮೂಲಕ ಕಾಂಗ್ರೆಸ್ ಸರಕಾರ ರಾಜ್ಯದ ಜನತೆಯ ಮೇಲೆ ದರ ಏರಿಕೆಯ ಬರೆ ಹಾಕಿರುವುದು ಖಂಡನೀಯ ಎಂದರು.

ಬಿಜೆಪಿ ಪ್ರಮುಖರಾದ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ; ಈಗಾಗಲೇ ವಿದ್ಯುತ್ ದರ, ಬಸ್ ಪ್ರಯಾಣ ದರ, ತರಕಾರಿ, ಬೇಳೆ ಕಾಳುಗಳ ಬೆಲೆ, ಮದ್ಯದ ಬೆಲೆ, ನಂದಿನಿ ಹಾಲು, ಮೊಸರು ಮಜ್ಜಿಗೆಯ ಬೆಲೆ ಏರಿಸಿರುವುದು ಸರಿಯಲ್ಲ. ಜನರ ಮೇಲೆ ಹೊರೆ ಏರಿಸೋದು ಅಕ್ಷಮ್ಯ ಅಪರಾಧ. ಇನ್ನಾದರೂ ಜನಸಾಮಾನ್ಯರ ವಿರೋಧಿ ಧೋರಣೆ ಬಿಟ್ಟು ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಪೆಟ್ರೋಲ್, ಡೀಸೆಲ್, ಬೆಲೆ ಏರಿಕೆ ಮಾಡಿರುವ ಭಂಡತನದ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ರಸ್ತೆತಡೆ, ಪ್ರತಿಭಟನೆ ನಡೆಸಿದ ಬಳಿಕ ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮರ್, ಶಾಸಕ ಪೊನ್ನಣ್ಣ ಅವರ ಅಣಕು ಶವ ಯಾತ್ರೆ ಪ್ರದರ್ಶಿಸಿ ಪ್ರತಿಕೃತಿ ದಹನ ಮಾಡಿದರು.

ಮಾಜಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜು ಗಣಪತಿ, ಅಜಿತ್ ಕರುಂಬಯ್ಯ, ವಿವಿಧ ಮೋರ್ಚಾ ಹಾಗೂ ಪ್ರಕೋಷ್ಠ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು, ಜನ ಪ್ರತಿನಿಧಿಗಳು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಭಾಜಪ ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನಾ ನಿರತರು ರಸ್ತೆ ತಡೆ ಮಾಡಲು ಮುಂದಾದಾಗ ಪೊಲೀಸರು ತಡೆದು ರಸ್ತೆ ತಡೆಗೆ ಅವಕಾಶವಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ರಸ್ತೆ ತಡೆಗೆ ಅವಕಾಶ ನೀಡಲಿಲ್ಲ. ಈ ವೇಳೆ ಬಿಜೆಪಿ ಕಾರ್ಯಕರ್ತರು ಪಟ್ಟು ಬಿಡದೆ ರಸ್ತೆ ತಡೆ ನಡೆಸಿ ನಾವು ವಾಹನ ಸವಾರರಿಗೆ ಬೇಕಾಗಿಯೇ ನಡೆಸುತ್ತಿರುವ ಪ್ರತಿಭಟನೆ, ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೆಲಕಾಲ ರಸ್ತೆ ತಡೆ ನಡೆಸಿದರು.ಕುಶಾಲನಗರ, ಜೂ .೨೦: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಕುಶಾಲನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.

ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರಕಾರದ ವಿರುದ್ದ ಧಿಕ್ಕಾರ ಕೂಗಿದರು. ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ಸರಕಾರವಾಗಿ ರೂಪುಗೊಂಡಿದೆ. ಪಂಚಭಾಗ್ಯ ಹೆಸರಿನಲ್ಲಿ ಜನರಿಂದ ಕಿತ್ತು ಜನರಿಗೆ ಕೊಡುಗೆ ನೀಡುವ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ಇದರಿಂದ ಜನತೆ ಬೇಸತ್ತಿದ್ದಾರೆ.

ಇದಕ್ಕೆ ಲೋಕಸಭಾ ಚುನಾವಣಾ ಫಲಿತಾಂಶವೇ ಸಾಕ್ಷಿ. ಇದೀಗ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಇದನ್ನು ಅವಲಂಬಿಸಿರುವ ಇತರ ಕ್ಷೇತ್ರಗಳಿಗೆ ಕೂಡ ಹೊರೆ ಉಂಟಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಕೂಡ ವಿದ್ಯುತ್ ಪೂರೈಸದೆ ಸತಾಯಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಹಳ್ಳಿಹಳ್ಳಿಗಳಲ್ಲಿ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಕೂಡಲೇ ಸರಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ ಎಂದರು.

ಕುಶಾಲನಗರ ಬಿಜೆಪಿ ಅಧ್ಯಕ್ಷ ಎಂ.ಎA.ಚರಣ್ ಮಾತನಾಡಿ, ಬಿಜೆಪಿ ಸರಕಾರವಿದ್ದಾಗ ಬೆಲೆ ಏರಿಕೆ ವಿರುದ್ದ ಆರೋಪಿಸಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ತಾವೇ ಸ್ವತಃ ಬೆಲೆ ಏರಿಕೆಯಲ್ಲಿ ಮಗ್ನರಾಗಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮೂಲಕ ಕಾಂಗ್ರೆಸ್ ಸರಕಾರ ಜನಸಾಮಾನ್ಯರು ಪರಿತಪಿಸುವಂತೆ ಮಾಡಿರುವುದು ಖಂಡನೀಯ. ಕೂಡಲೇ ಬೆಲೆ ಏರಿಕೆಗೆ ಕಡಿವಾಣ ಹಾಕಿ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮ ವಹಿಸಬೇಕಿದೆ ಎಂದರು.

(ಮೊದಲ ಪುಟದಿಂದ) ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ, ಬೆಲೆ ಏರಿಕೆಯಿಂದ ಮಧ್ಯಮ ಹಾಗೂ ಬಡ ವರ್ಗದ ಜನತೆಗೆ ಅನಾನುಕೂಲ ಉಂಟಾಗಿದೆ. ರಾಜ್ಯದ ಕಾಂಗ್ರೆಸ್ ಆಡಳಿತ ಆರ್ಥಿಕ ಸುವ್ಯವಸ್ಥೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ಕೆ.ಚಂದ್ರ, ಪ್ರಧಾನ ಕಾರ್ಯದರ್ಶಿ ಅಮೃತ್ ರಾಜ್, ನಗರ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಮಧುಸೂದನ್, ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಪ್ರಧಾನ ಕಾರ್ಯದರ್ಶಿ ಸಚಿನ್, ಪುರಸಭೆ ಸದಸ್ಯ ಜಯವರ್ಧನ್ ಸೇರಿದಂತೆ ಮುಖಂಡರಾದ ಎಂ.ಡಿ. ಕೃಷ್ಣಪ್ಪ, ವಿ.ಡಿ. ಪುಂಡರೀಕಾಕ್ಷ, ಚಿಲ್ಲನ ಗಣಿಪ್ರಸಾದ್, ಪ್ರವೀಣ್, ಚಂದ್ರಶೇಖರ್ ಹೇರೂರು, ಜಿ.ಎಲ್. ನಾಗರಾಜ್, ಸೋಮಶೇಖರ್, ಪ್ರಭಾಕರ್, ಮಹಿಳಾ ಘಟಕದ ಸರಳರಾಮಣ್ಣ, ಅನಿತಾ ಉತ್ತಪ್ಪ, ಗಂಗಮ್ಮ, ಶೋಭಾ, ಗೀತಾಂಜಲಿ ಮತ್ತಿತರ ಕಾರ್ಯಕರ್ತರು ಇದ್ದರು.