ಸೋಮವಾರಪೇಟೆ,ಜೂ.೧೮: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಮೂಲ ನಿವಾಸಿಗಳ ನೆಲೆಯಾಗಿರುವ ವಿವಿಧ ಹಾಡಿಗಳಿಗೆ ಭೇಟಿ ನೀಡಿ, ಹಾಡಿವಾಸಿಗಳ ಸಮಸ್ಯೆಗೆ ಕಿವಿಯಾದರು. ಹಾಡಿ ಮನೆಗಳ ಬಾಗಿಲು ತಟ್ಟಿ ಸಮಸ್ಯೆ ಆಲಿಸಲು ಬಂದ ಶಾಸಕರನ್ನು ಕಂಡು, ಹಾಡಿವಾಸಿಗಳು ತಮ್ಮ ಸಂಕಷ್ಟಗಳನ್ನು ಬಿಚ್ಚಿಟ್ಟರು. ಇಂದಿನಿAದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿ ಯಲ್ಲಿರುವ ಒಟ್ಟು ೪೯ ಹಾಡಿಗಳಿಗೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಶಾಸಕ ಮಂತರ್ ಗೌಡ ಅವರು, ಪ್ರಥಮ ದಿನದಲ್ಲಿ ಸೋಮವಾರಪೇಟೆಯ ಕಿಬ್ಬೆಟ್ಟ, ವಳಗುಂದ, ಚಿಕ್ಕಬ್ಬೂರು, ನೇಗಳ್ಳಿ ಕರ್ಕಳ್ಳಿ, ಹಳೆ ಮದಲಾಪುರ, ಯಲಕನೂರು ಹೊಸಳ್ಳಿ, ಆಡಿನಾಡೂರು, ಹಿತ್ಲುಮಕ್ಕಿ, ಗೋಣಿಮರೂರು, ಉಂಜಿಗನಹಳ್ಳಿ, ಬಾಣಾವರ, ಸಂಗಯ್ಯನಪುರ ದಲ್ಲಿರುವ ಗಿರಿಜನ, ಬೆಟ್ಟಕುರುಬ, ಜೇನು ಕುರುಬ ಸೇರಿದಂತೆ ಇತರ ಜನಾಂಗಗಳ ಹಾಡಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.

ಬಹುತೇಕ ಹಾಡಿಗಳಲ್ಲಿ ತಲತಲಾಂತರದಿAದ ಮೂಲ ನಿವಾಸಿಗಳು ನೆಲೆಸಿದ್ದರೂ ಸಹ ಇಂದಿಗೂ ಸರ್ಕಾರಿ ದಾಖಲೆಗಳು ಇಲ್ಲದಿರುವುದು ಕಂಡು ಬಂತು. ಪ್ರಮುಖವಾಗಿ ಹಲವಷ್ಟು ಮಂದಿಗೆ ಆಧಾರ್ ಕಾರ್ಡ್ ಇಲ್ಲದಿರುವುದ ರಿಂದ ಸರ್ಕಾರದ ಯಾವೊಂದು ಸೌಲಭ್ಯಗಳು ಲಭಿಸದಿರುವ ಬಗ್ಗೆ ಮನವರಿಕೆ ಮಾಡಿಕೊಂಡ ಶಾಸಕರು, ಎಲ್ಲಾ ಹಾಡಿಗಳಲ್ಲಿರುವ ಆಧಾರ್ ಕಾರ್ಡ್ ವಂಚಿತರನ್ನು ಒಟ್ಟು ಗೂಡಿಸಿ, ಕ್ಯಾಂಪ್ ಆಯೋಜಿಸುವ ಮೂಲಕ ಆಧಾರ್ ಕಾರ್ಡ್ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಉಳಿದಂತೆ ಬಹುತೇಕ ಹಾಡಿಗಳಲ್ಲಿ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಕೆಲವೆಡೆ ಇಂದಿಗೂ ನೀರಿನ ಸಮಸ್ಯೆ, ಜಾಗದ ಹಕ್ಕುಪತ್ರ ಸಮಸ್ಯೆ, ಶುಚಿತ್ವ, ಶಾಲೆಗೆ ತೆರಳಲು ಮಕ್ಕಳಿಗೆ ವಾಹನದ ವ್ಯವಸ್ಥೆ, ಮನೆಗಳ ಸಮಸ್ಯೆಗಳ ಬಗ್ಗೆ ಹಾಡಿವಾಸಿಗಳು,

(ಮೊದಲ ಪುಟದಿಂದ) ಶಾಸಕರ ಗಮನಕ್ಕೆ ತಂದರು. ಪ್ರತಿಯೋರ್ವರ ಸಮಸ್ಯೆಗಳನ್ನು ಆಲಿಸಿದ ಶಾಸಕ ಮಂತರ್ ಗೌಡ ಅವರು, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿ ತಮಗೆ ವರದಿ ನೀಡುವಂತೆ ಖಡಕ್ ಸೂಚನೆ ನೀಡಿದರು.

ಹಲವಷ್ಟು ಹಾಡಿವಾಸಿಗಳಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾಗದ ಹಕ್ಕುಪತ್ರ ನೀಡದಿದ್ದರೂ, ಮತದಾರರ ಗುರುತಿನ ಚೀಟಿ ನೀಡಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಶಾಸಕರು, ರಾಜಕಾರಣಿ ಗಳು ಚುನಾವಣೆಗಾಗಿ ಮಾತ್ರ ಇವರುಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಆದರೆ ಕನಿಷ್ಟ ದಾಖಲೆಗಳನ್ನು ಈವರೆಗೆ ಒದಗಿಸಿಕೊಟ್ಟಿಲ್ಲ. ಇನ್ನಾದರೂ ರಾಜಕಾರಣ ಬದಲಾಗಬೇಕು. ನಾವುಗಳೇ ಹಾಡಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಇರುವ ಹಾಡಿಗಳಿಗೆ ಭೇಟಿ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಖಂಡಿತಾ ಪರಿಹರಿಸುತ್ತೇನೆ ಎಂದು ಅಭಯ ನೀಡಿದರು.

ಕಿಬ್ಬೆಟ್ಟ ಗಿರಿಜನ ಹಾಡಿಯಲ್ಲಿ ೧೫ ಕುಟುಂಬಗಳಿದ್ದು, ಯಾರಿಗೂ ಹಕ್ಕು ಪತ್ರ ನೀಡಿಲ್ಲ. ಕುಡಿಯುವ ನೀರಿನ ಅಭಾವವಿದೆ ಎಂದು ಹಾಡಿ ನಿವಾಸಿ ಲೋಕೇಶ್ ಹೇಳಿದರು. ಹಾಡಿ ಇರುವ ಜಾಗ ಗ್ರಾಮಸ್ಥರು ಮತ್ತು ಅರಣ್ಯ ಎಂದು ಆರ್‌ಟಿಸಿಯಲ್ಲಿ ನಮೂ ದಾಗಿದೆ. ಹೀಗಾಗಿ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ ಎಂದು ಕಂದಾಯ ಅಧಿಕಾರಿ ಪ್ರಹ್ಲಾದ್ ಹೇಳಿದರು. ತಕ್ಷಣ ಜಂಟಿ ಸರ್ವೆ ಮಾಡಿ ಹಕ್ಕುಪತ್ರ ವಿತರಣೆ ಸಂಬAಧ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ, ಅರಣ್ಯ ಹಾಗೂ ಕಂದಾಯ ಅಧಿಕಾರಿಗಳಿಗೆ ಶಾಸಕ ಮಂತರ್ ನಿರ್ದೇಶನವಿತ್ತರು.

ಹಾಡಿಗಳಲ್ಲಿರುವ ವಿದ್ಯಾವಂತ ಯುವಕರು ನಮ್ಮೊಂದಿಗೆ ಕೈಜೋಡಿಸಬೇಕು. ಹಾಡಿಯ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತರುವ ಕೆಲಸ ಮಾಡಬೇಕು. ಮೂಲಭೂತ ಸೌಕರ್ಯ ಹಾಗೂ ಜೀವನ ಮಟ್ಟ ಸುಧಾರಣೆಗೆ ಮುಂದೆ ಬರಬೇಕೆಂದು ಶಾಸಕರು ಹೇಳಿದರು.

ಹಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕಗೊಳಿಸಬೇಕು. ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಗ್ರಾ.ಪಂ.ನ ವಾಹನಕ್ಕೆ ನೀಡಬೇಕು. ಅರಣ್ಯ ಪ್ರದೇಶ, ರಸ್ತೆ ಬದಿಗಳಲ್ಲಿ ಎಸೆಯಬಾರದು ಎಂದು ತಿಳಿ ಹೇಳಿದ ಶಾಸಕರು, ಪ್ರತಿ ಸೋಮವಾರ ಹಾಡಿಗೆ ಗ್ರಾ.ಪಂ. ತ್ಯಾಜ್ಯ ವಿಲೇವಾರಿ ವಾಹನ ಕಳುಹಿಸುವಂತೆ ಪಿಡಿಓ ಪೂರ್ಣಕುಮಾರ್ ಅವರಿಗೆ ಸೂಚಿಸಿದರು.

ಇದರೊಂದಿಗೆ ಪ್ರಮುಖ ರಸ್ತೆ ಬದಿಗಳಲ್ಲಿ ಕಸ ಎಸೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯ್ದ ಕಡೆಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕರು ನಿರ್ದೇಶನ ನೀಡಿದರು.

ವಳಗುಂದ ಹಾಡಿಯಲ್ಲಿ ೪೦ ಕುಟುಂಬಗಳಿದ್ದು, ಕೆಲವರಿಗೆ ಮನೆ ನಿರ್ಮಾಣವಾಗಿದೆ. ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ೧೦ ಮಂದಿಗೆ ಹಂದಿ ಸಾಕಾಣಿಕೆ, ಈರ್ವರಿಗೆ ಮಿಶ್ರತಳಿ ಹಸು ಸಾಕಾಣಿಕೆಗೆ ಸಹಾಯಧನ ಒದಗಿಸಲಾಗಿದೆ. ಸಮುದಾಯ ಭವನ, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖಾಧಿಕಾರಿ ಸಿದ್ದೇಗೌಡ ಹೇಳಿದರು.

ಹಾಡಿಯ ಮುಖಂಡರಾದ ಸೋಮಕ್ಕ ಮಾತನಾಡಿ, ವಳಗುಂದ ಹಾಡಿಯ ಮಂದಿಗೆ ಹಕ್ಕುಪತ್ರ ನೀಡಿಲ್ಲ. ೫೦ ವರ್ಷಗಳಿಂದ ಇಲ್ಲಿ ನೆಲೆಸಿದ್ದರೂ ಈವರೆಗೆ ದಾಖಲೆ ನೀಡಿಲ್ಲ. ‘ಕಚೇರಿಗೆ ಹೋದ್ರೆ ನಿಮ್ಮ ಜಾಗಕ್ಕೆ ಆರ್‌ಟಿಸಿ ಇಲ್ಲ, ಹಕ್ಕುಪತ್ರ ಇಲ್ಲ, ನಾವೇನು ಮಾಡೋಕೆ ಆಗಲ್ಲ’ ಎಂದು ಹೊರಕಳು ಹಿಸುತ್ತಾರೆಂದು ಆರೋಪಿಸಿದರು.

ಈ ಭಾಗದಲ್ಲಿ ೧೧ ಮಂದಿಯ ಹೆಸರಿನಲ್ಲಿ ಆರ್‌ಟಿಸಿ ಇದೆ. ಆದರೆ ಅವರ ಕುಟುಂಬದವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ೧೫ ಏಕರೆ ಜಾಗವಿದ್ದು, ಆರ್‌ಟಿಸಿಯಲ್ಲಿ ಹೆಸರಿರುವವರ ವಂಶವೃಕ್ಷ ನೀಡಿಲ್ಲ ಎಂದು ಕಂದಾಯ ಇಲಾಖೆಯ ಮಂಜುನಾಥ್ ಹೇಳಿದರು.

ತಕ್ಷಣ ಸರ್ವೆ ನಡೆಸಿ, ಇಲ್ಲಿನವರ ವಂಶವೃಕ್ಷ ಸರಿಪಡಿಸಿ ಹಕ್ಕುಪತ್ರ ನೀಡಲು ಕ್ರಮ ವಹಿಸುವಂತೆ ಶಾಸಕರು ಸೂಚಿಸಿದರು. ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಬೇಸಿಗೆಯಲ್ಲಿ ತೀವ್ರ ತೊಂದರೆ ಅನುಭವಿಸಿದ್ದೇವೆ ಎಂದು ಹಾಡಿ ನಿವಾಸಿಗಳು ಅಳಲು ತೋಡಿ ಕೊಂಡರು. ನೂತನವಾಗಿ ಬೋರ್‌ವೆಲ್ ಕೊರೆಸಲಾಗಿದ್ದು, ಮೋಟಾರ್ ಅಳವಡಿಸಬೇಕಿದೆ ಎಂದು ಅಭಿಯಂತರ ವೀರೇಂದ್ರ ಹೇಳಿದರು. ಒಂದು ವಾರದೊಳಗೆ ಮೋಟಾರ್ ಅಳವಡಿಸಿ ತಮಗೆ ವರದಿ ನೀಡಬೇಕೆಂದು ಶಾಸಕರು ಆದೇಶಿಸಿದರು.

ಶಾಸಕರ ಹಾಡಿ ಭೇಟಿ ಸಂದರ್ಭ ವಲಯ ಅರಣ್ಯಾಧಿಕಾರಿ ಗಾನಶ್ರೀ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಸಿದ್ದೇಗೌಡ, ಗ್ರಾ.ಪಂ. ಪಿಡಿಓ ಶ್ರೀನಿವಾಸ್, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ, ಸದಸ್ಯ ಅನು ಕುಮಾರ್, ಪ್ರಮುಖರಾದ ಬಿ.ಬಿ. ಸತೀಶ್, ಕೆ.ಎಂ. ಲೋಕೇಶ್, ಜೆ.ಎಲ್. ಜನಾರ್ಧನ್ ಹೆಚ್.ಆರ್. ಸುರೇಶ್, ವಸಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

- ವಿಜಯ್ ಹಾನಗಲ್