ಮಡಿಕೇರಿ, ಜೂ. ೧೮ : ದಕ್ಷಿಣ ಭಾರತದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕಾವೇರಿ ತ್ರಿವೇಣಿ ಸಂಗಮದಲ್ಲಿ ಜಲಕ್ರೀಡೆಗೆ ಯಾವ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಪೊಲೀಸರು ಮತ್ತು ಭಗಂಡೇಶ್ವರ ದೇವಾಲಯ ಸಿಬ್ಬಂದಿ ಗಳಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು ಸೂಚಿಸಿದ್ದಾರೆ.

ಭಾಗಮಂಡಲ ಮೇಲ್ಸೇತುವೆ ವೀಕ್ಷಣೆ ಸಂದರ್ಭದಲಿ ತ್ರಿವೇಣಿ ಸಂಗಮದಲ್ಲಿ ಈಜಾಡುತ್ತಿದ್ದ ಪ್ರವಾಸಿಗರನ್ನು ಕಂಡು ಗರಂ ಆಗಿ ಸಿಬ್ಬಂದಿ ವರ್ಗದವರನ್ನು ತರಾಟೆಗೆ ತೆಗೆದುಕೊಂಡರು. ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ಜಲಕ್ರಿಡೆ ನಡೆಸುತ್ತಿದ್ದ ಪ್ರವಾಸಿಗರಿಗೆ ಕ್ಷೇತ್ರದ ಪಾವಿತ್ರö್ಯತೆ ಬಗ್ಗೆ ತಿಳಿಸಿ ಮನವರಿಕೆ ಮಾಡಿದರು.

ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ವಾತಾವರಣ ನಿರ್ಮಾಣ ವಾಗಬಾರದು.

ಸಿಬ್ಬಂದಿಗಳು ಕಾವಲು ಕಾಯುವಂತೆ ನಿರ್ದೇಶನ ನೀಡಿದ ಪೊನ್ನಣ್ಣ ಅವರು ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದ್ದರೆ ಒದಗಿಸುವುದಾಗಿ ತಿಳಿಸಿದರು.

ಪ್ರವಾಸಿಗರಿಗೆ ಈ ನಿಟ್ಟಿನಲ್ಲಿ ಮಾಹಿತಿ ನೀಡಲು ತಿಳುವಳಿಕೆ ಫಲಕ ಅಳವಡಿಸುವಂತೆ ಠಾಣಾಧಿಕಾರಿ ಶೋಭಾ ಅವರಿಗೆ ಸೂಚನೆ ನೀಡಿದರು.

ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೊನ್ನಣ್ಣ ಭಾಗಮಂಡಲ ಮತ್ತು ತಲಕಾವೇರಿ ಪೌರಾಣಿಕ ಹಿನ್ನೆಲೆ ಉಳ್ಳ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ವಿರುದ್ಧವಾಗಿ ಯಾವುದೇ ನಡವಳಿಕೆ ಸಹಿಸಲು ಸಾಧ್ಯವಿಲ್ಲ.

ಮಾಹಿತಿ ಕೊರತೆಯಿಂದ ಕೆಲ ಪ್ರವಾಸಿಗರಿಂದ ಅಪಚಾರವಾಗುತ್ತಿರುವ ವಿವರಗಳು ತಮ್ಮ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಾವು ಬದ್ದರಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ತೆನ್ನಿರ ಮೈನಾ, ರಮಾನಾಥ್, ಸೂರಜ್ ಹೊಸೂರು, ಸುನಿಲ್ ಪತ್ರಾವೋ, ನೆರವಂಡ ಉಮೇಶ್, ದೇವಂಗೋಡಿ ಹರ್ಷ, ಕುದುಪಜೆ ಪ್ರಕಾಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.