ಸಿದ್ದಾಪುರ, ಜೂ. ೧೭ : ಯುವಕನೋರ್ವನು ಹಣದ ಆಸೆಗೆ ಬಲಿಯಾಗಿ ಆನ್‌ಲೈನ್‌ನಲ್ಲಿ ೨ ಲಕ್ಷದ ೧೫ ಸಾವಿರ ರೂ ಕಳೆದುಕೊಂಡ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.

ಪಾಲಿಬೆಟ್ಟದ ಖಾಸಗಿ ರೆಸಾರ್ಟ್ವೊಂದರಲ್ಲಿ ಉದ್ಯೋಗಿಯಾಗಿರುವ ಹಾಕತ್ತೂರು ನಿವಾಸಿ ಪ್ರಶಾಂತ್ ಎಂಬಾತನ ಮೊಬೈಲ್ ಸಂಖ್ಯೆಗೆ ಜೂನ್ ೯ ರಂದು ಅನಾಮಧೇಯ ಹೆಸರಿನಲ್ಲಿ ವಾಟ್ಸಾö್ಯಪ್ ಮೂಲಕ ಸಂದೇಶ ಬಂದಿದ್ದು, ಸಂದೇಶದಲ್ಲಿ ತಮ್ಮ ವ್ಯಾಪ್ತಿಯ ಹೊಟೇಲ್‌ಗಳಿಗೆ ರಿವ್ಯೂ ನೀಡಿ ಹಾಗೂ ಇಂತಿಷ್ಟು ಹಣವನ್ನು ಹೂಡಿಕೆ ಮಾಡಿದರೆ ಪ್ರತಿದಿನ ರೂ. ಸಾವಿರದಿಂದ ಲಕ್ಷ ಸಂಪಾದನೆ ಮಾಡಬಹುದೆಂಬ ಆಮಿಷ ಒಡ್ಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಪ್ರಾರಂಭದಲ್ಲಿ ೧ ಸಾವಿರ ಹಾಗೂ ೭ ಸಾವಿರ ಹಣವನ್ನು ತನ್ನ ಖಾತೆಯ ಮೂಲಕ ವರ್ಗಾಯಿಸಿದ್ದಾನೆ. ಹಾಗೆಯೇ ಪ್ರಶಾಂತನ ಖಾತೆಗೆ ಹತ್ತು ಸಾವಿರ ರೂ. ಹಣ ಬಂದಿತ್ತು.

(ಮೊದಲ ಪುಟದಿಂದ) ಹಣ ಬರುವುದನ್ನು ಗಮನಿಸಿದ ಪ್ರಶಾಂತ್ ಮತ್ತಷ್ಟು ಹಣ ಮಾಡುವ ಉದ್ದೇಶದಿಂದ ಕೇವಲ ೮ ದಿನಗಳಲ್ಲಿ ಬರೋಬರಿ ೨ ಲಕ್ಷದ ೧೫ ಸಾವಿರ ಹಣವನ್ನು ಅನಾಮಧೇಯ ಖಾತೆಗೆ ವರ್ಗಾಯಿಸಿದ್ದಾನೆ. ಹಣ ವರ್ಗಾಯಿಸಿದ ನಂತರ ಈತನಿಗೆ ಹಣ ಹಿಂತಿರುಗದೇ ಇರುವುದನ್ನು ಗಮನಿಸಿ ಈ ಕುರಿತು ಸ್ನೇಹಿತರೊಂದಿಗೆ ಚರ್ಚಿಸಿದ ಸಂದÀರ್ಭ ತಾನು ಮೋಸ ಹೋಗಿರುವುದು ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆ್ಯಪ್‌ಗಳ ಮೂಲಕ ಬರುವ ಸಂದೇಶಗಳ ಬಗ್ಗೆ ಎಚ್ಚರ ವಹಿಸುವಂತೆ ಮಾಹಿತಿ ನೀಡಿದ್ದರೂ ಕೂಡ ಪದೇ ಪದೇ ವಿದ್ಯಾವಂತ ಯುವಕರೇ ಮೋಸ ಹೋಗುತ್ತಿರುವುದು ಕಂಡುಬರುತ್ತಿದೆ. ಸಿದ್ದಾಪುರ ಸುತ್ತಮುತ್ತ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಆ್ಯಪ್ ಮೂಲಕ ಕೃಷಿಕನೋರ್ವನು ಕೋಟಿಗಟ್ಟಲೆ ಹಣ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ವಿಪರ್ಯಾಸ. ಇತ್ತೀಚೆಗೆ ಹೆಚ್ಚಿನ ಹಣದ ಆಸೆ ತೋರಿಸಿ ಮೊಬೈಲ್‌ಗೆ ಬರುವ ಸಂದೇಶಗಳನ್ನು ಸ್ವೀಕರಿಸಿ ಹಣ ಕಳೆದುಕೊಂಡವರಿಗೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.