ಮಡಿಕೇರಿ, ಜೂ. ೧೭: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕರು ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಸೈಕಲ್ ತುಳಿದು, ಕಾರು ದೂಡಿಕೊಂಡು ಮೆರವಣಿಗೆ ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾ ನಿರತರು ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮಿಸಿ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು. ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಮಂಡೇಪAಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಸೈಕಲ್ ತುಳಿದರೆ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಮಂಡೇಪAಡ ಸುನಿಲ್ ಸುಬ್ರಮಣಿ, ಎಸ್.ಜಿ.ಮೇದಪ್ಪ ಸೇರಿದಂತೆ ಪಕ್ಷದ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಕಾರ್ಯಕರ್ತರು ಕಾರನ್ನು ಹಗ್ಗದಿಂದ ಕಟ್ಟಿ ಎಳೆದೊಯ್ದು ಸರಕಾರದ ನಡೆಯನ್ನು ಅಣಕು ಪ್ರದರ್ಶನದ ಮೂಲಕ ಟೀಕಿಸಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜೂನ್ ೧೫ ಕರ್ನಾಟಕಕ್ಕೆ ಒಂದು ಕರಾಳ ದಿನ. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಯಾರು ನಿರೀಕ್ಷಿಸದ ರೀತಿ ಇಂಧನಕ್ಕೆ ‘ವ್ಯಾಟ್’ ಹೆಚ್ಚಿಸಿ ಬೆಲೆ ಏರಿಸಿ ರಾಜ್ಯ ವ್ಯಾಪಿ ಜನರಿಗೆ ಕಾಂಗ್ರೆಸ್ ಸರಕಾರ ಅನ್ಯಾಯವೆಸಗಿದೆ. ಬೆಲೆ ಏರಿಕೆ ಮೂಲಕ ಲೂಟಿ ಮಾಡಲು ಸರಕಾರ ಮುಂದಾಗಿರುವ ಕ್ರಮ ಎಂದು ಆರೋಪಿಸಿದ ಅವರು, ಹೇಳುವುದೊಂದು ಮಾಡುವುದೊಂದು ಎಂಬುದು ಕಾಂಗ್ರೆಸ್ ಛಾಳಿಯಾಗಿದೆ. ಬೇರೆ ರಾಜ್ಯಗಳಲ್ಲಿ ಇಂಧನ ೧೦೦ ರೂ. ತಲುಪಿಲ್ಲ. ಇದೀಗ ಬೇರೆ ರಾಜ್ಯದ

(ಮೊದಲ ಪುಟದಿಂದ) ಇಂಧನ ಬೆಲೆಯನ್ನು ಉಲ್ಲೇಖಿಸುವುದರೊಂದಿಗೆ ಸುಳ್ಳು ಹೇಳಿ ಮುಖ್ಯಮಂತ್ರಿ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ಈ ಹಿಂದಿನ ಬಿಜೆಪಿ ಸರಕಾರ ಇಂಧನ ದರವನ್ನು ಇಳಿಸಿತ್ತು. ಪ್ರಸ್ತುತ ಇರುವ ಸರಕಾರ ದಿವಾಳಿಯಾಗಿದ್ದು, ಗ್ಯಾರಂಟಿಗಾಗಿ ಇಂಧನ ದರ ಏರಿಸಿ ೬ನೇ ಗ್ಯಾರಂಟಿಯಾಗಿ ಜಾರಿಗೊಳಿಸಿದೆ. ಇದರಿಂದ ಸ್ವಾಭಾವಿಕವಾಗಿ ಬೇರೆ ಉತ್ಪನ್ನಗಳ ಬೆಲೆಯೂ ಏರಿಕೆ ಕಾಣಲಿದ್ದು, ಇದರ ದುಷ್ಪರಿಣಾಮ ಹೆಚ್ಚಿರುತ್ತದೆ. ಇದೊಂದು ದರಿದ್ರ ಸರಕಾರ. ಈ ರೀತಿಯ ಜನವಿರೋಧಿ ನೀತಿಯನ್ನು ಜನರು ಪ್ರಶ್ನಿಸಬೇಕು. ಈ ಸರಕಾರದಿಂದ ನೆಮ್ಮದಿ ಇಲ್ಲದ ಪರಿಸ್ಥಿತಿ ತಲೆದೋರಿದೆ. ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳು ಅಧಿಕಗೊಳುತ್ತಿವೆ. ಅಲ್ಲದೆ ಆನೇಕ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡನೀಯ. ಬೆಲೆ ಇಳಿಕೆಯ ಭರವಸೆ ನೀಡಿದ್ದ ಸಿದ್ದರಾಮಯ್ಯ ಇಂದು ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಸಿದ್ದರಾಮಯ್ಯ ೧೫ ಬಾರಿ ಹಣಕಾಸು ಸಚಿವರಾಗಿದ್ದರು. ಈ ರೀತಿ ದರ ಹೆಚ್ಚಳದಿಂದ ಸಾಗಾಣಿಕೆ, ಸಾರಿಗೆ ವೆಚ್ಚ ಹೆಚ್ಚಾಗಿ ಬಡವರಿಗೆ ಹೊಡೆತ ಬೀಳುತ್ತದೆ ಎಂದು ಅರಿವಿಗೆ ಬರಬೇಕಾಗಿತ್ತು. ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ ಈ ಸರಕಾರದಿಂದ ನಡೆದಿದ್ದು, ತಪ್ಪಿತಸ್ಥರ ತಲೆ ದಂಡ ಆಗಲಿರುವುದು ನಿಶ್ಚಿತ. ರಾಜ್ಯದಲ್ಲಿ ಈ ಸರಕಾರ ಬಂದ ನಂತರ ೪೭೭ ಕೊಲೆ, ೨೦೦ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆೆ. ಇದರಿಂದ ಸಮಾಜದ ಶಾಂತಿ, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದು ಸರಕಾರದ ವೈಫಲ್ಯ ಎಂದು ಕುಟುಕಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟಿರುವ ನಟ ದರ್ಶನ್ ದುರಹಂಕಾರ ಹಾಗೂ ಪ್ರಭಾವದಿಂದ ಈ ರೀತಿ ಮಾಡಿದ್ದಾರೆ. ಅವರನ್ನು ತೀವ್ರ ವಿಚಾರಣೆಗೊಳಪಡಿಸಬೇಕು. ನೈಜಾಂಶ ಬಯಲಿಗೆ ತರಬೇಕೆಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ರಾಜ್ಯದಲ್ಲಿ ಸರಕಾರ ದಿವಾಳಿಯಾಗಿದೆ. ಚುನಾವಣೆ ತನಕ ಮಾತ್ರ ಗ್ಯಾರಂಟಿ ಮುಂದಿಟ್ಟು ಜನರಿಗೆ ಮಂಕುಬೂದಿ ಎರಚಿತ್ತು. ಇದೀಗ ಜನಸಾಮಾನ್ಯರು ಬಳಸುವ ವಸ್ತು, ಉತ್ಪನ್ನಗಳ ಮೇಲೆ ಬೆಲೆ ಏರಿಸಿ ಸಾಮಾನ್ಯ ಜನರ ಬದುಕಿಗೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಸರಕಾರ ಮಾಡಿದೆ. ಸರಕಾರ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ಅಂತರರಾಷ್ಟಿçÃಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಆದರೆ ಕೇಂದ್ರ ಸರಕಾರ ದೇಶದಲ್ಲಿ ಬೆಲೆ ಏರಿಸುತಿತ್ತು. ಇದೀಗ ರಾಜ್ಯದಲ್ಲಿ ಮಾತ್ರ ಬೆಲೆ ಏರಿಕೆ ಮಾಡಿರುವ ಹಿಂದೆ ಅನುಮಾನಗಳು ಮೂಡಿದ್ದು, ಬಿಟ್ಟಿ ಭಾಗ್ಯ ಸದ್ಯದಲ್ಲೇ ಸ್ಥಗಿತಗೊಳ್ಳುತ್ತದೆ. ವಾಲ್ಮೀಕಿ ನಿಗಮ ಹಗರಣವನ್ನು ಮುಚ್ಚಿ ಹಾಕಲು ತೆರೆಮರೆ ಪ್ರಯತ್ನಗಳು ಸಾಗಿವೆ ಎಂದು ದೂಷಿಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಿ.ಕೆ. ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ, ಮನುಮಂಜುನಾಥ್, ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಅಫ್ರು ರವೀಂದ್ರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಮಡಿಕೇರಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಕಾರೇರ ಕವನ್ ಕಾವೇರಪ್ಪ, ಪ್ರಮುಖರಾದ ಬೆಪ್ಪುರನ ಮೇದಪ್ಪ, ಸಜಿಲ್ ಪಿ ಕೃಷ್ಣ, ಮಾಪಂಗಡ ಯಮುನಾ ಚಂಗಪ್ಪ, ಮಲ್ಲಂಡ ಮಧು ದೇವಯ್ಯ, ಕುಟ್ಟಂಡ ಅಜಿತ್ ಕರುಂಬಯ್ಯ, ಡೀನ್ ಬೋಪಣ್ಣ, ಅರುಣ್ ಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.