ಸಿದ್ದಾಪುರ, ಜೂ. ೧೬: ಕಳೆದ ೭೦ ವರ್ಷಗಳಿಂದಲೂ ಅಭಿವೃದ್ಧಿ ಕಾಣದೇ ವಂಚಿತರಾಗಿರುವ ಹಾಡಿ ನಿವಾಸಿಗಳಿಗೆ ಕನಿಷ್ಟ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ರಾಜಕೀಯ ಮಾಡುತ್ತಿದ್ದು, ಹಾಡಿ ನಿವಾಸಿಗಳ ಹೊಂದಾಣಿಕೆಯ ಬದುಕನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಟ್ಟಳ್ಳಿ ಹಾಡಿಯ ಮುಖಂಡ ಶಂಕರ ಆರೋಪಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಟ್ಟಳ್ಳಿ ಹಾಡಿ ಸುತ್ತಮುತ್ತ ೭೦ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಅರಣ್ಯ ಮಸೂದೆ ಕಾಯ್ದೆ ಪ್ರಕಾರ ಹಕ್ಕುಪತ್ರ ಹೊಂದಿದ್ದಾರೆ. ೭೦ ವರ್ಷ ಕಳೆದರೂ ಇಂದಿಗೂ ವಿದ್ಯುತ್ ಬೆಳಕು ಕಾಣದೆ ಕತ್ತಲ ಜೀವನ ನಡೆಸುವಂತಾಗಿದೆ. ಕೆಲವು ಕುಟುಂಬಗಳು ಇಂದಿಗೂ ಗುಡಿಸಲು ಮನೆಗಳಲ್ಲೇ ವಾಸವಾಗಿದ್ದಾರೆ.
ಪಂಚಾಯಿತಿಯಿAದ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ ಶಾಶ್ವತ ಯೋಜನೆ ಆಗಿಲ್ಲ. ರಸ್ತೆ, ಮನೆ ಸೇರಿದಂತೆ ಹಲವು ಸಮಸ್ಯೆಗಳು ಹಾಡಿಯಲ್ಲಿದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಕೆಲ ಅಧಿಕಾರಿಗಳು ಹಾಗೂ ಪಂಚಾಯಿತಿಯ ಕೆಲ ಸದಸ್ಯರುಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಸುಮಾರು ೪೦ ಮಂದಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡಿ ತಡೆ ಮಾಡುತ್ತಿದ್ದರು. ಈ ಬಗ್ಗೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತರಲಾಗಿತ್ತು. ಚುನಾವಣೆ ನಂತರ ಯೋಜನೆ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಗಂಗಾ ಕಲ್ಯಾಣ ಯೋಜನೆ ಯನ್ನು ಬೇರೆ ಪಕ್ಷದ ಪಂಚಾಯಿತಿ ಸದಸ್ಯರುಗಳು ಸೂಚಿಸಿದವರಿಗೆ ಮಾತ್ರ ನೀಡಲಾಗುತ್ತಿದೆ.
ನಲವತ್ತು ಮಂದಿ ಪಲಾನುಭವಿಗಳ ಪೈಕಿ ಕೆಲವರಿಗೆ ಮಾತ್ರ ಯೋಜನೆ ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ.
ಉಳಿದವರಿಗೆ ಬೇರೆ ಬೇರೆ ಕಾರಣಗಳನ್ನು ಹೇಳಿ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದ ಅವರು ರಾಜಕೀಯ ತಾರತಮ್ಯ ಮಾಡಿದ್ದಲ್ಲಿ, ಹಾಡಿ ನಿವಾಸಿಗಳನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೇನು ಕುರುಬರ ಸಂಘದ ಅಧ್ಯಕ್ಷ ಜೆ.ಕೆ. ರಾಮು ಮಾತನಾಡಿ ಹಾಡಿಗಳಲ್ಲಿ ವಾಸವಾಗಿರುವ ಆದಿವಾಸಿಗಳನ್ನು ಅಭಿವೃದ್ಧಿ ಮೂಲಕ ಮುಖ್ಯ ವಾಹಿನಿಗೆ ತರಲು ಮುಂದಾಗಬೇಕು.
ಅಭಿವೃದ್ಧಿ ಕಾರ್ಯಗಳಿಗೆ ರಾಜಕೀಯ ಇರಬಾರದು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಆದಿವಾಸಿ ಹಾಡಿಗಳನ್ನು ಮೂಲ ಸೌಕರ್ಯದೊಂದಿಗೆ ಅಭಿವೃದ್ಧಿ ಪಡಿಸಲು ಮುಂದಾಗಬೇಕೆAದು ಹೇಳಿದ ಅವರು ಮನೆಗಳ ಯೋಜನೆ ಪೂರ್ತಿಯಾಗಿಲ್ಲ, ವಿದ್ಯುತ್ ಸಂಪರ್ಕವು ಇಲ್ಲ ಹಾಡಿಯ ನಿವಾಸಿಗಳು ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಅಧಿಕಾರಿಗಳು ಆದಷ್ಟು ಬೇಗ ಮನೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತಾಯಿಸಿದರು.ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಇಂದಿರಾ ಮಾತನಾಡಿ ಕಳೆದ ೭೦ ವರ್ಷಗಳಿಂದಲೂ ಮೂಲ ಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿರುವ ಹಾಡಿ ನಿವಾಸಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ತರಬೇಕು ಎಂದರು.
ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ನಿರ್ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಶಾಸಕರು ಇದರ ಬಗ್ಗೆ ಗಮನ ಹರಿಸಬೇಕೆಂದು ಒತಾಯಿಸಿದರು.
ಈ ಸಂದರ್ಭ ಹಾಡಿಯ ನಿವಾಸಿಗಳಾದ ಕೃಷ್ಣ, ಶಿವಣ್ಣ, ಪಾರ್ವತಿ, ಗೌರು, ಸುಧಾಕರ್, ಕುಶ, ಲಿಂಗಮ್ಮ, ನಾಗೇಶ ಸೇರಿದಂತೆ ಮತ್ತಿತರರು ಹಾಜರಿದ್ದರು.
- ಎಸ್.ಎಂ. ಮುಬಾರಕ್