ಮಡಿಕೇರಿ, ಜೂ.೧೬ : ವಿವಿಧ ವಿಭಾಗಗಳಲ್ಲಿ ಸಾಧನೆ ತೋರಿದ ಪ್ರತಿಭೆಗಳನ್ನು ಗುರುತಿಸಿ ಅವರುಗಳನ್ನು ಕರ್ನಾಟಕದ ಎಲ್ಲೆಡೆ ಪರಿಚಯಿಸುವ ಸಲುವಾಗಿ ಹೊರ ತಂದ ಬಾಗಲಕೋಟೆಯ ಸಾಹಿತಿ ಹಾಗೂ ಶಿಕ್ಷಕರಾದ ಮುತ್ತು ಯ ವಡ್ಡರ ಅವರ ಎಲೆ ಮರೆ ಕಾಯಿಗಳು ಸಾಧಕರ ಪರಿಚಯ ಕೃತಿಯಲ್ಲಿ ಕೊಡಗಿನ ನಟಿ, ನಿರ್ಮಾಪಕಿ, ಸಹ ನಿರ್ದೇಶಕಿ ಹಾಗೂ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಎಲೆ ಮರೆ ಕಾಯಿಗಳು ಕೃತಿಯಲ್ಲಿ ಎಲ್ಲಿಯೂ ಪರಿಚಯವಾಗದ ೪೬ ಮಂದಿ ಸಾಧಕರನ್ನು ಪರಿಚಯಿಸಲಾಗಿದ್ದು, ಇದರಲ್ಲಿ ಕೊಡಗಿನ ಈರಮಂಡ ಹರಿಣಿ ವಿಜಯ್ ಅವರ ಪರಿಚಯವನ್ನು ಮಾಡಿಕೊಡಲಾಗಿದೆ.
ಲಯನ್ಸ್ ಕ್ಲಬ್ ಆಫ್ ಮೈಸೂರ್ ಮಿಲೇನಿಯಮ್, ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ, ನಿಸರ್ಗ ಸಂಗೀತ ಮಹಾವಿದ್ಯಾಲಯ ಹನುಮಸಾಗರ ಹಾಗೂ ಮೈಸೂರು ಸಂಜನಾ ಪ್ರತಿಷ್ಠಾನ ಬಳಗದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ನಟರಾಜ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹರಿಣಿ ವಿಜಯ್ ಸೇರಿದಂತೆ ಕರ್ನಾಟಕದ ವಿವಿಧೆಡೆಯಿಂದ ಆಗಮಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.