ಮಡಿಕೇರಿ, ಜೂ. ೧೬: ಮಾನ್ಯ ಸರ್ವೋಚ್ಚ ನ್ಯಾಯಾಲಯವು ವಿಶೇಷ ಲೋಕ್ ಅದಾಲತ್ ಅನ್ನು ತಾ. ೨೯ ರಿಂದ ಆಗಸ್ಟ್ ೩ ರವರೆಗೆ ನಡೆಸಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಪಕ್ಷಕಾರರುಗಳಿಗೆ, ಎದುರುದಾರರ ಜೊತೆ ಪೂರ್ವಭಾವಿ ಲೋಕ್ ಅದಾಲತ್‌ಅನ್ನು ನಡೆಸಲು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಎಲ್ಲಾ ಪಕ್ಷಕಾರರು ವೀಡಿಯೋ ಕಾನ್ಫರೆನ್ಸ್ ಮೂಲಕ ಸರ್ವೋಚ್ಚ ನ್ಯಾಯಾಲಯವು ನಡೆಸುವ ಪೂರ್ವಭಾವಿ ಲೋಕ್ ಅದಾಲತ್‌ನಲ್ಲಿ ಭಾಗವಹಿಸಲು ಅನುಕೂಲ ಮಾಡಲಾಗಿರುತ್ತದೆ.

ಈ ವಿಶೇಷ ಲೋಕ್ ಅದಾಲತ್‌ನಲ್ಲಿ ರಾಜೀ ಸಂಧಾನಕ್ಕೆ ಗುರುತಿಸಲಾದ ಪ್ರಕರಣಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ವರದಿಯಾಗಿರುತ್ತದೆ. ಇದರಿಂದ ಈ ಪ್ರಕರಣಗಳಲ್ಲಿನ ಎಲ್ಲಾ ಪಕ್ಷಕಾರರುಗಳು ತಮ್ಮ ವಾಸಸ್ಥಳಗಳ ವ್ಯಾಪ್ತಿಯಲ್ಲಿ ಬರುವ ತಾಲೂಕು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ತೆರೆಯಲಾಗಿರುವ ವೀಡಿಯೋ ಕಾನ್ಫರೆನ್ಸ್ ಕೇಂದ್ರಗಳಿಗೆ ಭೇಟಿ ಕೊಟ್ಟು ತಾ. ೨೯ ರಿಂದ ಆಗಸ್ಟ್ ೩ ರವರೆಗೆ ನಡೆಯುವ ವಿಶೇಷ ಲೋಕ್ ಅದಾಲತ್‌ನಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕೋರಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ತಿತಿತಿ.ಞsಟsಚಿ.ಞಚಿಡಿ.ಟಿiಛಿ.iಟಿ ಅನ್ನು ಸಂಪರ್ಕಿಸಬಹುದು ಹಾಗೂ ಆಯಾಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಬಹುದು ಮತ್ತು ಕ್ಯೂಆರ್‌ಕೋಡ್‌ನಲ್ಲಿ ಟೆಲಿಗ್ರಾಂ ಚಾನಲ್‌ಗೆ ಚಂದಾದಾರರಾಗಿ ಎನ್‌ಎಎಲ್‌ಎಸ್‌ಎ ಸಹಾಯವಾಣಿ ಸಂಖ್ಯೆ ೧೫೧೦೦ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್. ರಘುನಾಥ್ ತಿಳಿಸಿದ್ದಾರೆ.