ಸೋಮವಾರಪೇಟೆ, ಮೇ ೪: ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ-ಪರಂಪರೆಯನ್ನು ಉಳಿಸಿಕೊಂಡು ಮುಂದೆ ಸಾಗಲು ಸಮಾಜ ಬಾಂಧವರ ಒಗ್ಗೂಡುವಿಕೆ ಅಗತ್ಯ ಎಂದು ಮೊಗೇರ ಸೇವಾ ಸಮಾಜದ ಮಾಜಿ ಅಧ್ಯಕ್ಷ ಹಾಗೂ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯ ಪಿ.ಎಂ. ರವಿ ಹೇಳಿದರು.

ಸೋಮವಾರಪೇಟೆಯ ಮೊಗೇರ ಯುವ ವೇದಿಕೆ ವತಿಯಿಂದ ಪಟ್ಟಣದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿರುವ ಮೊಗೇರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಿಂದ ಸಂಘಟನೆ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸಮುದಾಯಗಳು ಕ್ರೀಡಾಕೂಟವನ್ನು ಆಯೋಜಿಸಿ ತಮ್ಮ ಸಮುದಾಯಗಳ ಸಂಘಟನೆಯಲ್ಲಿ ತೊಡಗಿಕೊಂಡಿವೆ. ಮೊಗೇರ ಸಮಾಜವು ಜಿಲ್ಲೆಯಲ್ಲಿ ೨೦೦೩ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಸಾಮೂಹಿಕ ವಿವಾಹ, ರಕ್ತದಾನ, ಬಡ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ಸಮಾಜದವರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿದೆ ಎಂದರು.

ಜಿಲ್ಲೆಯಲ್ಲಿ ೪೦ ಸಾವಿರಕ್ಕೂ ಅಧಿಕ ಮೊಗೇರ ಸಮಾಜ ಬಾಂಧವರಿದ್ದು, ಇನ್ನಷ್ಟು ಒಗ್ಗಟ್ಟು ಸಾಧಿಸಬೇಕಿದೆ. ಸಮುದಾಯದ ಯುವ ಜನಾಂಗ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಬೇಕು. ಗ್ರಾಮ ಮಟ್ಟದಲ್ಲಿ ಸಂಘಟನೆಗಳು ಬಲಗೊಳ್ಳಬೇಕು ಎಂದು ರವಿ ಅಭಿಪ್ರಾಯಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಕೆ.ಎ. ಯಾಕೂಬ್, ಮೊಗೇರ ಸಮುದಾಯದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತವಾಗಬಾರದು.

(ಮೊದಲ ಪುಟದಿಂದ) ಯಾವುದೇ ಕ್ಷೇತ್ರದ ಸಾಧನೆಗೆ ವಿದ್ಯೆ ಅತೀ ಮುಖ್ಯ ಎಂದರಲ್ಲದೆ, ಹಲವಷ್ಟು ವರ್ಷಗಳಿಂದ ಲೈನ್‌ಮನೆಗಳಲ್ಲಿಯೇ ನೆಲೆಸಿರುವ ಮೊಗೇರ ಸಮುದಾಯದವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆಯವರು ಶಾಸಕರು, ಸರ್ಕಾರದ ಗಮನ ಸೆಳೆಯಬೇಕೆಂದರು.

ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ಕ್ರೀಡೆಗಳು ಪರಸ್ಪರ ಸಾಮರಸ್ಯ ಮೂಡಿಸಲು ಸಹಕಾರಿ. ಅನೇಕ ಕ್ರೀಡಾಪಟುಗಳು ಎಲೆಮರೆಯ ಕಾಯಿಯಂತಿದ್ದು, ಇವರುಗಳಿಗೆ ಸೂಕ್ತ ವೇದಿಕೆ ನಿರ್ಮಿಸುವ ಮೂಲಕ ಪ್ರತಿಭೆಯನ್ನು ಗುರುತಿಸುವ ಕೆಲಸ ಆಗಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಮೊಗೇರ ಯುವ ವೇದಿಕೆ ಅಧ್ಯಕ್ಷ ಪಿ.ಬಿ. ಸುರೇಶ್ ಮಾತನಾಡಿ, ಕ್ರೀಡೆಯ ಮೂಲಕ ಸಮಾಜದ ಯುವ ಜನಾಂಗವನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗಿದ್ದು, ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ೮ ತಂಡಗಳು ಲೀಗ್‌ನಲ್ಲಿ ಭಾಗವಹಿಸಿವೆ ಎಂದರು.

ವೇದಿಕೆಯಲ್ಲಿ ಮೊಗೇರ ಸಮಾಜದ ಗೌರವಾಧ್ಯಕ್ಷ ಪಿ.ಕೆ. ಚಂದ್ರು, ಉಪಾಧ್ಯಕ್ಷ ವೆಂಕಪ್ಪ, ಜಿಲ್ಲಾ ಕ್ರೀಡಾ ಸಮಿತಿ ಅಧ್ಯಕ್ಷ ಎಂ.ಜಿ. ಚಂದ್ರ, ಖಜಾಂಚಿ ದೇವರಾಜ್, ಪ್ರಮುಖರಾದ ಕೆ.ಎನ್. ರಾಜೇಶ್, ಅಪ್ಪು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇಂದು ಫೈನಲ್-ಸಮಾರೋಪ: ಮೊಗೇರ ಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ತಾ. ೫ರಂದು (ಇಂದು) ನಡೆಯಲಿದೆ. ಫೈನಲ್ ಪಂದ್ಯಾಟದ ನಂತರ ಸಂಜೆ ೬ ಗಂಟೆಗೆ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಯುವ ವೇದಿಕೆ ಅಧ್ಯಕ್ಷ ಪಿ.ಬಿ. ಸುರೇಶ್ ತಿಳಿಸಿದ್ದಾರೆ.