ಸೋಮವಾರಪೇಟೆ, ಮೇ ೪: ಭಾರತ ಜೂನಿಯರ್ ಪುರುಷರ ಹಾಕಿ ತಂಡದಲ್ಲಿ ಜಿಲ್ಲೆಯ ಈರ್ವರು ಹಾಕಿ ಪಟುಗಳು ಸ್ಥಾನ ಪಡೆದಿದ್ದಾರೆ.

ದೆಹಲಿಯಲ್ಲಿಂದು ಭಾರತ ಜೂನಿಯರ್ ಹಾಕಿ ತಂಡವನ್ನು ಅಧಿಕೃತವಾಗಿ ಪ್ರಕಟಿಸಿರುವ ಹಾಕಿ ಇಂಡಿಯಾ, ತಂಡದಲ್ಲಿ ಕರ್ನಾಟಕದ ಈರ್ವರಿಗೆ ಸ್ಥಾನ ನೀಡಿದೆ. ಈರ್ವರು ಹಾಕಿ

ಪಟುಗಳೂ ಸಹ ಕೊಡಗಿನವರೇ ಆಗಿರುವುದು ವಿಶೇಷ.

(ಮೊದಲ ಪುಟದಿಂದ) ಸೋಮವಾರಪೇಟೆ ಪಟ್ಟಣದ ಉದಯೋನ್ಮುಖ ಆಟಗಾರ, ಈಗಾಗಲೇ ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್‌ನಲ್ಲಿರುವ ಹೆಚ್.ಎ. ವಚನ್ ಹಾಗೂ ಪೊನ್ನಂಪೇಟೆಯ ಬಿ.ಆರ್. ಬಿಪಿನ್ ಅವರುಗಳು ಸ್ಥಾನ ಪಡೆದಿದ್ದಾರೆ.

ಯುರೋಪ್‌ನಲ್ಲಿ ಇದೇ ತಿಂಗಳ ೨೦ ಮತ್ತು ೨೯ರಂದು ನಡೆಯಲಿರುವ ಪಂದ್ಯಾವಳಿಯಲ್ಲಿ ಬೆಲ್ಜಿಯಂ, ಜರ್ಮನಿ ಹಾಗೂ ನೆದರ್‌ಲ್ಯಾಂಡ್ ತಂಡಗಳ ವಿರುದ್ಧ ಭಾರತ ಜೂನಿಯರ್ ಹಾಕಿ ತಂಡವನ್ನು ಕೊಡಗಿನಿಂದ ಈರ್ವರು ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. ಬಿಪಿನ್ ಹಾಗೂ ವಚನ್ ಅವರುಗಳು ತಂಡದ ೨೦ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈರ್ವರೂ ಸಹ ‘ಮಿಡ್‌ಫೀಲ್ಡ್’ ಆಟಗಾರರಾಗಿದ್ದು, ಮುಂದಿನ ದಿನಗಳಲ್ಲಿ ಭಾರತ ರಾಷ್ಟಿçÃಯ ಹಾಕಿ ತಂಡವನ್ನು ಪ್ರತಿನಿಧಿಸುವ ಭರವಸೆ ಮೂಡಿಸಿದ್ದಾರೆ. ಹೆಚ್.ಎ. ವಚನ್, ಸೋಮವಾರಪೇಟೆ ಡಾಲ್ಫಿನ್ಸ್ ಸ್ಫೋರ್ಟ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಹೆಚ್.ಎ. ಅಶೋಕ್ ಹಾಗೂ ಹೆಚ್.ಎ. ಸುಜಿನಿ ದಂಪತಿ ಪುತ್ರ. ಬಿ.ಆರ್. ಬಿಪಿನ್ ಪೊನ್ನಂಪೇಟೆಯ ರವಿ ಹಾಗೂ ಸುನಂದ ದಂಪತಿ ಪುತ್ರ.