*ಗೋಣಿಕೊಪ್ಪ, ಏ. ೨೬: ಕೊಡಗು-ಮೈಸೂರು ಕ್ಷೇತ್ರದ ಚುನಾವಣೆ ಪೊನ್ನಂಪೇಟೆ ತಾಲೂಕಿನ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆಯಿತು. ಪೊನ್ನಂಪೇಟೆ ತಾಲೂಕಿನಾದ್ಯಂತ ಮತದಾರರು ತಮ್ಮ ತಮ್ಮ ಬೂತ್‌ಗಳಿಗೆ ತೆರಳಿ ದೇಶಕ್ಕಾಗಿ ತಮ್ಮ ಹಕ್ಕನ್ನು ಚಲಾಯಿಸಿದರು.

ಪ್ರಥಮ ಬಾರಿಗೆ ಅತಿ ಉತ್ಸಾಹದಿಂದ ೧೮ರ ಮೇಲ್ಪಟ್ಟ ಯುವ ಸಮುದಾಯ ಮತದಾನ ಮಾಡಿತು. ವೀಲ್ ಚೇರ್‌ನಲ್ಲಿ, ಆಟೋ, ಇನ್ನಿತರ ವಾಹನಗಳಲ್ಲಿ ಮತಗಟ್ಟೆಗಳೆಡೆಗೆ ಬರುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯ ವ್ಯಕ್ತಿಯೊಬ್ಬನ ಹಕ್ಕನ್ನು ಚಲಾಯಿಸಿ ಮತದಾರರು ಸಂಭ್ರಮಿಸಿದರು.

ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ಸಖಿ ಕೇಂದ್ರ ಮತಗಟ್ಟೆಯಿತ್ತು. ಮತಗಟ್ಟೆಯನ್ನು ಅಲಂಕಾರಗೊಳಿಸಿ ಮತದಾರರನ್ನು ಆಕರ್ಷಿಸಲಾಯಿತು. ಈ ಮತಗಟ್ಟೆಗೆ ಬಂದ ಮಹಿಳೆಯರನ್ನು ಸಾಲಿನಲ್ಲಿ ನಿಲ್ಲಿಸಿ ಕಾಯಿಸುವ ಬದಲಾಗಿ ಮೊದಲ ಆದ್ಯತೆ ನೀಡಲಾಯಿತು.

ಪೊನ್ನಂಪೇಟೆ, ತಿತಿಮತಿ, ಗೋಣಿಕೊಪ್ಪ, ಬಿ. ಶೆಟ್ಟಿಗೇರಿ, ಕುಟ್ಟ, ಕಾನೂರು, ಶ್ರೀಮಂಗಲ, ನಾಲ್ಕೇರಿ, ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ, ಮಾಯಮುಡಿ, ಬಾಳಾಜಿ ಮತಗಟ್ಟೆಗಳಲ್ಲಿಯೂ ಮತದಾನ ಪ್ರಕ್ರಿಯೆ ಬೆಳಿಗ್ಗೆ ೭ರಿಂದ ಮಧ್ಯಾಹ್ನದ ತನಕ ಬಿರುಸಿನಿಂದ ನಡೆಯಿತು. ನಂತರ ಮಧ್ಯಾಹ್ನ ಬಿಸಿಲಿನ ಬೇಗೆಗೆ ಮತಗಟ್ಟೆಗಳೆಡೆಗೆ ಮತದಾರರು ಬರುವುದು ನಿಧಾನಗತಿಯಿಂದ ಸಾಗಿತಾದರೂ, ಸಂಜೆ ೫ರ ನಂತರ ಮತದಾನ ಮತ್ತಷ್ಟು ಬಿರುಸುಗೊಂಡಿತು. ತಿತಿಮತಿ, ನಿಟ್ಟೂರು, ಬೂತ್‌ಗಳಲ್ಲಿ ಹೆಚ್ಚಾಗಿ ಬುಡಕಟ್ಟು ಸಮುದಾಯದವರು ಮತದಾನ ಮಾಡುವ ಮೂಲಕ ಗಮನ ಸೆಳೆದರು.