ಸೋಮವಾರಪೇಟೆ, ಏ. ೨೬: ಒಂದೆರಡು ಗೊಂದಲಮಯ ಘಟನೆಗಳ ಹೊರತಾಗಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

ಶಾಂತಳ್ಳಿ ಬೂತ್‌ನಲ್ಲಿ ಬೆಳಿಗ್ಗೆ ೭ ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಇವಿಎಂ ಯಂತ್ರದಲ್ಲಿನ ತಾಂತ್ರಿಕ ದೋಷದಿಂದಾಗಿ ಅರ್ಧ ಗಂಟೆಗಳ ಕಾಲ ವಿಳಂಬವಾಗಿ ಆರಂಭವಾಯಿತು. ಚೌಡ್ಲು ಬೂತ್‌ನಲ್ಲಿ ಮತದಾರನೋರ್ವ ಮತಗಟ್ಟೆಯೊಳಗೆ ಮೊಬೈಲ್ ಕೊಂಡೊಯ್ದಿದ್ದರಿAದ ಗೊಂದಲ ಏರ್ಪಟ್ಟು, ಪೊಲೀಸ್ ಠಾಣೆಗೆ ಪ್ರಕರಣ ವರ್ಗವಾಯಿತು. ಉಳಿದಂತೆ ಸೋಮವಾರಪೇಟೆ ಭಾಗದಲ್ಲಿ ಮತದಾನ ಯಾವುದೇ ಸಮಸ್ಯೆಗಳಿಲ್ಲದೆ ಸುಸೂತ್ರವಾಗಿ ನಡೆಯಿತು.

ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಬಿರುಸಿನಿಂದ ಮತದಾನ ನಡೆಯಿತು. ಪ್ರಥಮ ಮತ ಚಲಾಯಿಸುವ ಸಂಭ್ರಮದಲ್ಲಿ ಯುವ ಸಮೂಹ ಕಂಡುಬAದರೆ, ೯೨ರ ವರ್ಷದಲ್ಲೂ ದೊಡ್ಡಮಳ್ತೆಯ ತಿಮ್ಮಮ್ಮ ಅವರು ಮಗನ ಸಹಾಯದಿಂದ ಮತ ಚಲಾಯಿಸಿ ತಮ್ಮ ಹಕ್ಕು ಪ್ರತಿಪಾದಿಸಿದರು.

ಬೆಳಿಗ್ಗೆ ೭ ಗಂಟೆಯ ವೇಳೆಗೆ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಸ್ಥಳೀಯ ಗ್ರಾ.ಪಂ. ಸಿಬ್ಬಂದಿಗಳನ್ನು ಒಳಗೊಂಡAತೆ ಚುನಾವಣಾ ಕರ್ತವ್ಯಕ್ಕೆ ನಿರತರಾಗಿದ್ದ ಅಧಿಕಾರಿಗಳು ಸುಸೂತ್ರ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರು. ವಯಸ್ಕರು, ವಿಶೇಷಚೇತನರಿಗೆ ಗಾಲಿ ಕುರ್ಚಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ ಸಹಕಾರ ನೀಡಲು ನೇಮಿಸಿಕೊಂಡಿದ್ದ ಸ್ವಯಂ ಸೇವಕರು ವಯಸ್ಕರು ಹಾಗೂ ವಿಶೇಷಚೇತನÀರನ್ನು ಗಾಲಿ ಕುರ್ಚಿಯಲ್ಲಿ ಮತಗಟ್ಟೆಗೆ ಕರೆತಂದು ಹಕ್ಕು ಚಲಾಯಿಸಲು ನೆರವಾದರು.

ಬೆಳಿಗ್ಗೆಯೇ ಮತಗಟ್ಟೆಗೆ ಆಗಮಿಸಿದ ಮತದಾರರು ತಮ್ಮ ಮತ ಚಲಾಯಿಸಿ ನಂತರ ಕೆಲಸ ಕಾರ್ಯಗಳಿಗೆ ತೆರಳಿದರು. ಪ್ರಮುಖವಾಗಿ ಕೂಲಿ ಕಾರ್ಮಿಕ ಮತದಾರರು ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಮಾಜಿ ಶಾಸಕ ಬಿ.ಎ. ಜೀವಿಜಯ ಅವರು ಬಿಳಿಗೇರಿ ಸರ್ಕಾರಿ ಶಾಲೆಯಲ್ಲಿ, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ ಅವರು ಶಾಂತಳ್ಳಿ ಸರ್ಕಾರಿ ಶಾಲೆಯ ಬೂತ್‌ನಲ್ಲಿ ಮತ ಚಲಾಯಿಸಿದರು.

ಮತಗಟ್ಟೆಯ ಹೊರಭಾಗದಲ್ಲಿ ಪ್ರಮುಖ ಎರಡು ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ಹಂತದ ಮತಯಾಚನೆಯಲ್ಲಿ ತೊಡಗಿಕೊಂಡಿದ್ದರು. ೧೦೦ ಮೀಟರ್ ಅಂತರದೊಳಗೆ ಮತಯಾಚನೆ ಮಾಡುತ್ತಿದ್ದ ಸಂದರ್ಭ ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ಹೊರ ಕಳುಹಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ನೇರ ಹಣಾಹಣಿಯಲ್ಲಿದ್ದು, ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲದೇ ಇರುವುದರಿಂದ ಆ ಪಕ್ಷದ ಕಾರ್ಯಕರ್ತರು ಅಷ್ಟಾಗಿ ಬೂತ್ ಬಳಿ ಕಂಡುಬರಲಿಲ್ಲ. ಕೆಲವೊಂದು ಬೂತ್‌ಗಳಲ್ಲಿ ಮಾತ್ರ ಜೆಡಿಎಸ್ ಪಕ್ಷದವರು ಮತಯಾಚನೆಯಲ್ಲಿ ತೊಡಗಿದ್ದರೂ ಪಕ್ಷದ ಬಾವುಟ, ಶಾಲುಗಳು ಹೆಚ್ಚಾಗಿ ಕಂಡುಬರಲಿಲ್ಲ. ಜೆಡಿಎಸ್ ಬೆಂಬಲಿಗರು ಹೆಚ್ಚಿರುವ ಕಡೆಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಕೆಲವರು ತೊಡಗಿಸಿಕೊಂಡು, ಮತಯಾಚನೆ ಮಾಡಿದರು.

ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮತಗಟ್ಟೆಗಳಲ್ಲಿ ಜನರ ಸರತಿ ಸಾಲು ಕಂಡುಬAತು. ಮಧ್ಯಾಹ್ನದ ಉರಿ ಬಿಸಿಲಿನ ಸಮಯದಲ್ಲಿ ಮತದಾನ ನೀರಸವಾಗಿತ್ತು. ಕಳೆದ ವಿಧಾನ ಸಭಾ ಚುನಾವಣೆಗೆ ಹೋಲಿಸಿದರೆ ಈಗಿನ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಉತ್ಸಾಹ ಅಷ್ಟಾಗಿ ಕಂಡುಬರಲಿಲ್ಲ.

ಶಾಸಕ ಡಾ. ಮಂಥರ್ ಗೌಡ, ಮಾಜೀ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರುಗಳು ಬೆಳಿಗ್ಗೆಯೇ ಮತ ಚಲಾಯಿಸಿ ನಂತರ ಕ್ಷೇತ್ರದಾದ್ಯಂತ ವಿವಿಧ ಮತಗಟ್ಟೆಗಳಿಗೆ ತೆರಳಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತನಾಡಿಸುತ್ತಿದ್ದರು. ಅಂತೆಯೇ ಮತದಾನದ ವಿವರ ಪಡೆಯುತ್ತಿದ್ದರು. ಇದರೊಂದಿಗೆ ಪಕ್ಷದ ಪ್ರಮುಖ ನಾಯಕರುಗಳು ತಮ್ಮ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ತೆರಳಿ ಮತದಾರರ ಮನವೊಲಿಸುವ ಕಾರ್ಯ ಮಾಡುತ್ತಿದ್ದರು.

ಮತದಾನ ಮಾಡಿದ ವಧು : ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಗಳ್ಳೆ ಕರ್ಕಳ್ಳಿ ಗ್ರಾಮದ ಎನ್. ಸೋಮಶೇಖರ್ ಅವರ ಪುತ್ರಿ ಬಿಂದು ಅವರ ವಿವಾಹ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದು, ಹಸೆಮಣೆಗೆ ಏರುವ ಮುಂಚೆ ನೇಗಳ್ಳೆ-ಕರ್ಕಳ್ಳಿ ಶಾಲೆಯ ಬೂತ್‌ನಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ ೭. ೨೦ಕ್ಕೆ ಮತದಾನ ಮಾಡಿದ ನಂತರ ಮದುವೆ ಮಂಟಪಕ್ಕೆ ತೆರಳಿ ಹಸೆಮಣೆ ಶಾಸ್ತç ಮುಗಿಸಿ ಮಾಂಗಲ್ಯ ಧಾರಣೆ ಮಾಡಿದರು.

ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರುಗಳಲೆ ಗ್ರಾಮದ ಬಿ.ಸಿ. ದಯಾಸಾಗರ ಹಾಗೂ ಬಿ.ಎನ್. ಪಂಕಜ ಅವರ ಪುತ್ರಿ ಡಿ. ಪ್ರಿಯಾಂಕ, ಮಾಂಗಲ್ಯಧಾರಣೆಯ ನಂತರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಮದುವೆ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕ, ಸಂಜೆ ೫.೪೦ರ ವೇ¼ಗೆ ನೇರುಗಳಲೆ ಬೂತ್‌ಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ನ್ಯಾಯಾಧೀಶರಿಂದ ಮತದಾನ : ರಾಜ್ಯ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾಗಿರುವ ಪಟ್ಟಣ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮ ನಿವಾಸಿ ಹೆಚ್.ಕೆ. ನವೀನ್ ಅವರು ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭವೂ ಪ್ರತೀ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುತ್ತಾ ಬಂದಿರುವ ನ್ಯಾಯಾಧೀಶರಾದ ಹೆಚ್.ಕೆ. ನವೀನ್ ಅವರು, ಈ ಬಾರಿಯೂ ಬೆಂಗಳೂರಿನಿAದ ಬೆಳಿಗ್ಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.