ಸೋಮವಾರಪೇಟೆ, ಏ. ೨೩ : ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಒಕ್ಕಲಿಗರು ಮತ್ತು ಗೌಡರು ಜ್ಞಾಪಕಕ್ಕೆ ಬರುತ್ತಾರೆ. ನಂತರ ದೂರ ತಳ್ಳುತ್ತಾರೆ ಎಂದು ಒಕ್ಕಲಿಗ ಸಮುದಾಯದ ಮುಖಂಡ ಹಾಗೂ ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ ವ್ಯಂಗ್ಯವಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಅವರು ಒಕ್ಕಲಿಗ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಒಕ್ಕಲಿಗರು ಏಕೆ ಮತ ನೀಡಬೇಕು? ಎಂದು ಪ್ರಶ್ನಿಸಿದ ಅವರು, ಒಕ್ಕಲಿಗ ಮತ್ತು ಗೌಡ ಜನಾಂಗದವರು ಹಿಂದೆ ನಡೆದ ಯಾವ ಚುನಾವಣೆ ಯಲ್ಲೂ ಜಾತಿ ನೋಡಿ ಮತಹಾಕಿಲ್ಲ. ಅಭಿವೃದ್ಧಿ ಕೆಲಸ ಮಾಡುವ ಪಕ್ಷಗಳಿಗೆ ಮತ ನೀಡುತ್ತ ಬಂದಿದ್ದಾರೆ ಎಂದು ಅಭಿಪ್ರಾಯಿಸಿದರು.

ಜಿಲ್ಲೆಗೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರ ಸಂಘ ಹಾಗೂ ಕೊಡಗು ಗೌಡ ಸಂಘದವರೊAದಿಗೆ ಚರ್ಚೆ ಮಾಡಿ, ಕಾಂಗ್ರೆಸ್‌ನ ಲೋಕಸಭಾ ಚುನಾವಣೆಯ ಅಭ್ಯರ್ಥಿ ಲಕ್ಷö್ಮಣ್ ಅವರಿಗೆ ಮತ ನೀಡುವಂತೆ ಕೇಳಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಒಕ್ಕಲಿಗರು ಮತ್ತು ಗೌಡರು ಜ್ಞಾಪಕಕ್ಕೆ ಬಂದಿದ್ದಾರೆ. ನಂತರ ಯಾವುದೇ ಸ್ಥಾನಮಾನ ನೀಡದೇ ಅನ್ಯರ ಓಲೈಕೆಯಲ್ಲಿ ತೊಡಗುತ್ತಾರೆ ಎಂದು ದೂಷಿಸಿದರು. ಮೋದಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಒಕ್ಕಲಿಗರು, ಗೌಡರು ಸೇರಿದಂತೆ ಎಲ್ಲ ಜನಾಂಗದವರು ಮತ ನೀಡುವ ಮನಸ್ಸು ಮಾಡಿದ್ದಾರೆ ಎಂದರು.

ವಾಲ್ನೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ, ನಮ್ಮ ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಅನ್ಯಕೋಮಿ ನವರು ಕಾರು ಹತ್ತಿಸಿ ಕೊಲೆ ಮಾಡಿದ್ದಾರೆ. ಇಂತಹ ಸಂದರ್ಭ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್, ಲಕ್ಷö್ಮಣ್ ಅವರುಗಳು ಬಂದು ಸಾಂತ್ವನ ಹೇಳಲಿಲ್ಲ. ಪರಿಹಾರ ರೂಪದಲ್ಲಿ ಹಣವನ್ನು ಕೊಡಲಿಲ್ಲ. ಬಿಜೆಪಿಯ ಸಿ.ಟಿ.ರವಿ ಅವರು ಬಂದು ಸಾಂತ್ವನ ಹೇಳಿದ್ದಾರೆ. ಪಕ್ಷದ ವತಿಯಿಂದ ೧೦ ಲಕ್ಷ ರೂ.ಗಳನ್ನು ಮೃತ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ೨ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಇದು ಬಿಜೆಪಿಯ ಕಾಳಜಿ ಎಂದು ಹೇಳಿದರು.

ಹಿಂದಿನ ಲೋಕಾಸಭಾ ಚುನಾವಣೆಯಲ್ಲಿ ಬಿಜೆಪಿಯ ಧನಂಜಯ ಕುಮಾರ್, ಸದಾನಂದಗೌಡ, ಪ್ರತಾಪ್ ಸಿಂಹ ಅವರಿಗೆ ಮತ ನೀಡಿದ್ದಾರೆ. ಪ್ರತಾಪ್ ಸಿಂಹ ಅವರು ಕೊಡಗಿಗೆ ಅತೀ ಹೆಚ್ಚು ಅನುದಾನ ತಂದಿದ್ದಾರೆ. ಎಲ್ಲಾ ಸಮುದಾಯದವರ ಪರವಾಗಿ ಕೆಲಸ ಮಾಡಿದ್ದಾರೆ. ಅಭಿವೃದ್ಧಿಯೊಂದಿಗೆ ಪ್ರಧಾನಿ ಮೋದಿ ಅಲೆ ಕೊಡಗಿನಲ್ಲಿ ಹೆಚ್ಚಿದೆ. ಕೆಆರ್‌ಎಸ್ ಅಣೆಕಟ್ಟು ಕಟ್ಟಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮೈಸೂರು ರಾಜವಂಶಸ್ಥರ ಮನೆ ಮಗ ಯದುವೀರ್ ಅವರಿಗೆ ಜನರ ಆಶೀರ್ವಾದ ಇದೆ. ೨ಲಕ್ಷ ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದೇವೆ ಎಂದು ಹೇಳಿದರು.

ಚುನಾವಣೆ ಸಂದರ್ಭ ಜಾತಿ ತರುವುದು ಸರಿಯಿಲ್ಲ. ಮತದಾರರು ವಿವೇಚನೆಯಿಂದ ಮತ ಚಲಾಯಿಸ ಬೇಕು. ಹಿಂದುಗಳಿಗೆ ಭಾರತ ಒಂದೇ ದೇಶ ಇರುವುದು. ಎಲ್ಲಾ ಜಾತಿಯವರು ಸೇರಿ ದೇಶ ಕಟ್ಟೋಣ ಎಂಬ ಛಲ ಬರಬೇಕು ಎಂದು ಒಕ್ಕಲಿಗರ ಯುವವೇದಿಕೆಯ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ ಹೇಳಿದರು.

ಮೈಸೂರು ಅರಸರು ಎಲ್ಲಾ ವರ್ಗದ ಜನರಿಗೆ ಸೌಲಭ್ಯ ಒದಗಿಸಿ ದ್ದಾರೆ. ಆ ಮನೆತನದ ಯದುವೀರ್ ಅವರೂ ಸಹ ಅದೇ ಹಾದಿಯಲ್ಲಿ ಸಾಗಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಗಳ ಉಚಿತ ಯೋಜನೆಗಳಿಂದ ರಾಜ್ಯ ದಿವಾಳಿಯ ಹಾದಿಗೆ ತಲುಪುತ್ತಿದೆ. ಜನರಿಗೆ ಉಚಿತ ಆರೋಗ್ಯ ಮತ್ತು ಶಿಕ್ಷಣ ನೀಡಿದರೆ ಸಾಕು. ವೃದ್ಧರು, ವಿಕಲ ಚೇತನರು, ರೈತರು, ವಿದ್ಯಾರ್ಥಿಗಳಿಗೆ ಹೆಚ್ಚು ಸೌಲಭ್ಯ ನೀಡಬೇಕು ಎಂದು ಹೇಳಿದರು. ಗೋಷ್ಠಿಯಲ್ಲಿ ಯುವಮೋರ್ಚಾ ಉಪಾಧ್ಯಕ್ಷ ಜೀವನ್, ಕಾರ್ಯಕರ್ತರಾದ ಗೌಡಳ್ಳಿ ಪೃಥ್ವಿ ಉಪಸ್ಥಿತರಿದ್ದರು.