ಸೋಮವಾರಪೇಟೆ, ಏ. ೨೩ : ಜಾತ್ಯತೀತ ಜನತಾದಳದ ವರಿಷ್ಠರ ತೀರ್ಮಾನದಂತೆ ಕೊಡಗಿನಲ್ಲಿಯೂ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಧರ್ಮ ಪಾಲಿಸಲಿದ್ದಾರೆ. ಕಾರ್ಯಕರ್ತರು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಮಂದಣ್ಣ ಕಿಬ್ಬೆಟ್ಟ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ನಮ್ಮ ಪಕ್ಷದ ವರಿಷ್ಠರಾದ ಕುಮಾರಸ್ವಾಮಿ ಅವರೂ ಸಹ ಈ ಬಾರಿ ಎನ್‌ಡಿಎ ಒಕ್ಕೂಟದಿಂದ ಸ್ಪರ್ಧಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ದೇಶಮಟ್ಟದಲ್ಲಿ ಉತ್ತಮ ಸ್ಥಾನಮಾನ ಲಭಿಸುವ ನಿರೀಕ್ಷೆಯಿದೆ ಎಂದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿದಾಗ ನೂರಾರು ಕೋಟಿ ಅನುದಾನ ನೀಡಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಹಾಗೆಯೇ ರೈತರ ೧ಲಕ್ಷದವರೆಗೆ ಸಾಲಮನ್ನಾ ಮಾಡಿದ್ದಾರೆ. ಜಿಲ್ಲೆಯಲ್ಲಿಯೂ ಜೆಡಿಎಸ್ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮಂದಣ್ಣ ತಿಳಿಸಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೊನೆಕ್ಷಣದಲ್ಲಿ ತಟಸ್ಥರಾಗಿದ್ದರಿಂದ ಕಾರ್ಯರ್ಕರು ಹಾಗೂ ಮತದಾರರು ಗೊಂದಲಕ್ಕೀಡಾಗಿ ಇತರ ಪಕ್ಷಗಳಿಗೆ ಮತ ಚಲಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದೀಗ ದೇಶದ ಹಿತದೃಷ್ಟಿ, ಭದ್ರತೆ, ಅಭಿವೃದ್ಧಿಗಾಗಿ ದೇವೇಗೌಡ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದರು.

ದೇವೇಗೌಡ ಹಾಗೂ ಕುಮಾರಸ್ವಾಮಿ ರೈತಪರ ಕಾಳಜಿಯಳ್ಳ ನಾಯಕರಾಗಿದ್ದಾರೆ. ರೇವಣ್ಣ ಅವರು ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ೬೦ಸಾವಿರಕ್ಕೂ ಅಧಿಕ ಜೆಡಿಎಸ್ ಮತಗಳಿದ್ದು, ಈ ಬಾರಿ ಬಿಜೆಪಿಯ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಅಲ್ಪಸಂಖ್ಯಾತ ನಿಗಮ ಮಂಡಳಿಗೆ ೧೦ ಸಾವಿರ ಕೋಟಿ ನೀಡಿರುವ ಸರ್ಕಾರ ಕೊಡಗಿನ ರೈತರು ಬಾಕಿ ಉಳಿಸಿಕೊಂಡಿರುವ ವಿದ್ಯುಲ್ ಬಿಲ್ ೮೧ ಕೋಟಿ ಹಣವನ್ನು ಭರಿಸಲು ಸಾಧ್ಯವಾಗಿಲ್ಲ. ಈಗಿನ ಸರ್ಕಾರದಿಂದ ಅಭಿವೃದ್ಧಿ ಶೂನ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಲ್ಲರೂ ಬಿಜೆಪಿ ಬೆಂಬಲಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.