ಮೊದಲ ಹಂತದ ಲೋಕಸಭೆ ಚುನಾವಣೆ ಆರಂಭ

ನವದೆಹಲಿ, ಏ. ೧೯: ಲೋಕಸಭಾ ಚುನಾವಣೆ ೨೦೨೪ ರ ಮೊದಲ ಹಂತದ ಮತದಾನ ಆರಂಭಗೊAಡಿದ್ದು ೧೦೨ ಕ್ಷೇತ್ರಗಳಲ್ಲಿ ಈ ವರೆಗೂ ಶೇ. ೪೦ ರಷ್ಟು ಮತದಾನ ನಡೆದಿದೆ. ೨೧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ೧೮ನೇ ಲೋಕಸಭೆಗೆ ಮತದಾನ ನಡೆದಿದೆ. ಮೊದಲ ಹಂತದಲ್ಲಿ ತಮಿಳುನಾಡು (೩೯), ರಾಜಸ್ಥಾನ (೧೨), ಉತ್ತರ ಪ್ರದೇಶ (೮), ಮಧ್ಯಪ್ರದೇಶ (೬), ಉತ್ತರಾಖಂಡ (೫), ಅರುಣಾಚಲ ಪ್ರದೇಶ (೨), ಮೇಘಾಲಯ (೨), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (೧), ಮಿಜೋರಾಂ (೧), ನಾಗಾಲ್ಯಾಂಡ್ (೧), ಪುದುಚೇರಿ (೧), ಸಿಕ್ಕಿಂ (೧) ಮತ್ತು ಲಕ್ಷದ್ವೀಪ (೧). ಅಲ್ಲದೆ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ ೫, ಬಿಹಾರದಲ್ಲಿ ೪, ಪಶ್ಚಿಮ ಬಂಗಾಳದಲ್ಲಿ ೩, ಮಣಿಪುರದಲ್ಲಿ ಎರಡು ಮತ್ತು ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್‌ಗಢದಲ್ಲಿ ತಲಾ ೧ ಸ್ಥಾನಗಳಲ್ಲಿ ಚುನಾವಣೆ ನಡೆಯಿತು. ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆಗಳಿಗೂ ಚುನಾವಣೆ ನಡೆಯುತ್ತಿದೆ. ಇವುಗಳ ಪೈಕಿ ಅರುಣಾಚಲ ಪ್ರದೇಶದ ೬೦ ಸ್ಥಾನಗಳು ಮತ್ತು ಸಿಕ್ಕಿಂ ೩೨ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ನೇಹಾ ಕೊಲೆ ಖಂಡಿಸಿ ಇಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ

ಹುಬ್ಬಳ್ಳಿ, ಏ. ೧೯: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ತಾ. ೨೦ ರಂದು (ಇಂದು) ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಎಬಿವಿಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೧೦ ಗಂಟೆಗೆ ಎಲ್ಲಾ ಜಿಲ್ಲಾ ಕೇಂದ್ರದ ಎದುರು ವಿದ್ಯಾರ್ಥಿಗಳ ಜೊತೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಪದೇಪದೇ ಇಂತಹ ಪ್ರಕರಣಗಳು ನಡೆಯುತ್ತಿದ್ದು, ಮತ್ತೆ ಮರುಕಳಿಸಬಾರದು ಎಂದರೆ ಎನ್‌ಕೌಂಟರ್ ಕಾನೂನು ಜಾರಿಗೆ ಬರಬೇಕು. ನೇಹಾ ಕೊಲೆ ಮಾಡಿದ ಆರೋಪಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದರೆ, ಅದು ಲವ್ ಜಿಹಾದ್ ಎನ್ನುವುದು ಸ್ಪಷ್ಟ. ಫಯಾಜ್‌ನ ಪ್ರೀತಿಯನ್ನು ನೇಹಾ ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಅವಳ ಪಾಲಕರು ಅವಳನ್ನು ಎರಡು-ಮೂರು ತಿಂಗಳು ಕಾಲೇಜಿಗೆ ಕಳುಹಿಸಿರಲಿಲ್ಲ. ತನ್ನ ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಅವನು ಕೊಲೆ ಮಾಡಿದ್ದಾನೆ. ಆದರೆ, ಜವಾಬ್ದಾರಿ ಸ್ಥಾನದಲ್ಲಿ ಇರುವ ಮುಖ್ಯಮಂತ್ರಿ, ಗೃಹಸಚಿವರು ಅದೊಂದು ಆಕಸ್ಮಿಕ, ವೈಯಕ್ತಿ ಘಟನೆ ಎಂದು ಹೇಳಿಕೆ ನೀಡಿರುವುದು ಅಕ್ಷಮ್ಯ. ಕೊಲೆ ಮಾಡುವ ಉದ್ದೇಶದಿಂದಲೇ ಅವನು ಚಾಕು ತಂದಿದ್ದು ಎಂದು ಹೇಳಿದರು.

ಹೆಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟೀಸ್‌ಗೆ ಹೈಕೋರ್ಟ್ ತಡೆ

ಬೆಂಗಳೂರು, ಏ. ೧೯: "ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ" ಎಂದು ಚುನಾವಣಾ ಪ್ರಚಾರ ವೇಳೆ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯ ಮಹಿಳಾ ಆಯೋಗ ನೀಡಿದ್ದ ನೋಟೀಸ್‌ಗೆ ಹೈಕೋರ್ಟ್ ತಡೆ ನೀಡಿದೆ. ಇದನ್ನು ಪ್ರಶ್ನಿಸಿ ಹೆಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕುಮಾರಸ್ವಾಮಿ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಎ.ವಿ. ನಿಶಾಂತ್, ಆರೋಪಕ್ಕೆ ಸಂಬAಧಿಸಿದAತೆ ಆಯೋಗವು ಕುಮಾರಸ್ವಾಮಿ ಅವರಿಗೆ ನೋಟೀಸ್ ನೀಡಿ ಖುದ್ದು ಹಾಜರಾಗಲು ಸೂಚಿಸಿದೆ. ಆದರೆ, ಈ ನೋಟೀಸ್ ಪೂರ್ವಗ್ರಹ ಪೀಡಿತ ಭಾವನೆಯಿಂದ ಕೂಡಿದ್ದು ಸ್ವಾಭಾವಿಕ ನ್ಯಾಯತತ್ವಗಳಿಗೆ ವಿರುದ್ಧವಾಗಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ನೋಟೀಸ್‌ಗೆ ತಡೆ ನೀಡಿ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿö್ಮ ಚೌಧರಿಗೆ ತುರ್ತು ನೋಟೀಸ್ ಜಾರಿಗೊಳಿಸಲು ಆದೇಶಿಸಿತು. ಮಹಿಳಾ ಆಯೋಗದ ಅಧ್ಯಕ್ಷರು ಜಾರಿ ಮಾಡಿರುವ ನೋಟೀಸ್‌ಗೆ ಅರ್ಜಿ ಇತ್ಯರ್ಥವಾಗುವರೆಗೂ ತಡೆ ವಿಧಿಸಲಾಗಿದೆ ಎಂದು ಆದೇಶಿಸಿ ವಿಚಾರಣೆ ಮುಂದೂಡಿತು.

ನಿಷೇಧಾಜ್ಞೆ ರದ್ದು : ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ನವದೆಹಲಿ, ಏ. ೧೯: ಚುನಾವಣೆ ಕಾರಣದಿಂದ ಸಿಆರ್‌ಪಿಸಿ ಸೆಕ್ಷನ್ ೧೪೪ ಅಡಿಯಲ್ಲಿ ಹೇರಲಾಗುವ ನಿಷೇಧಾಜ್ಞೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಶುಕ್ರವಾರ ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ರಾ ಅವರನ್ನು ಒಳಗೊಂಡ ನ್ಯಾಯಪೀಠವು, ಚುನಾವಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರ‍್ಯಾಲಿ ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಕೆಯಾದ ಮೂರು ದಿನಗಳ ಒಳಗಾಗಿ ಸಂಬAಧಿಸಿದ ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತು. ಸಾಮಾಜಿಕ ಕಾರ್ಯಕರ್ತ ಅರುಣ್ ರಾಯ್ ಮತ್ತು ನಿಖಿಲ್ ಡೇ ಅವರು, ಪ್ರತಿ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಸಂದರ್ಭ ಫಲಿತಾಂಶ ಘೋಷಣೆಯಾಗುವವರೆಗೆ ಸಭೆ, ಸಮಾರಂಭ, ರ‍್ಯಾಲಿ ಅಥವಾ ಧರಣಿಗಳಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಸಿಆರ್‌ಪಿಸಿ ಸೆಕ್ಷನ್ ಅಡಿಯಲ್ಲಿ ನಿಷೇಧ ಹೇರುವ ಕ್ರಮವನ್ನು ರದ್ದು ಮಾಡಬೇಕು ಎಂದು ಕೋರಿದ್ದರು. ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಲಯವು ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿತು.