ವರದಿ : ವಾಸು/ಮುಬಾರಕ್

ಸಿದ್ದಾಪುರ, ಏ. ೧೮: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರ ವಾಗಿದ್ದು, ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಬಿಜೆಪಿ ಪ್ರಮುಖರು ಅನುಮಾನಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಅಪಘಾತದಲ್ಲಿ ವಾಲ್ನೂರು ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತ ರಾಮಪ್ಪ (೬೮) ಮೃತಪಟ್ಟಿದ್ದು, ಚಂದ್ರರಾಜ್ (೫೯), ರತೀಶ್ (೩೬) ಎಂಬವರು ಗಂಭೀರ ಗಾಯಗೊಂಡು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂ.ಬಿ. ಸುರೇಶ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರು ಚಾಲಕ ಕಂಬಿಬಾಣೆಯ ಹರ್ಷದ್ (೨೬) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಪಘಾತ ಸಂದರ್ಭ ಕಾರಿನಲ್ಲಿ ಮತ್ತೋರ್ವ ಇದ್ದನು ಎನ್ನಲಾಗಿದ್ದು, ಆತ ಇದೀಗ ಪರಾರಿಯಾಗಿದ್ದಾನೆ.

ಏನಿದು ಘಟನೆ?

ವಾಲ್ನೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ರಾಮಪ್ಪ ಸೇರಿದಂತೆ ಕೆಲವರು ರಸ್ತೆಯಲ್ಲಿ ನಡೆದುಕೊಂಡು ಮನೆಮನೆಗೆ ಪ್ರಚಾರ ಕಾರ್ಯಕ್ಕೆ ತೆರಳುತ್ತಿದ್ದ ಸಂದರ್ಭ ರಾತ್ರಿ ೮ ಗಂಟೆ ವೇಳೆಯಲ್ಲಿ ಸಿದ್ದಾಪುರದಿಂದ ಕುಶಾಲನಗರ ಕಡೆ ಹೋಗುತ್ತಿದ್ದ ಮಾರುತಿ ಎಸ್ಟಿಂ ಕಾರು (ಕೆ.ಎ.೦೨ ಝಡ್ ೭೩೪೭) ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಹಿಂಬದಿ ಯಿಂದ ಬಂದು ಗುದ್ದಿದೆ. ಅಪಘಾತ ಮಾಡಿ ಕಾರು ನಿಲ್ಲಿಸದೆ ಚಾಲಕ ಕುಶಾಲನಗರ ಮಾರ್ಗವಾಗಿ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.

(ಮೊದಲ ಪುಟದಿಂದ) ಸ್ಥಳೀಯರು ವಾಹನದ ಮೂಲಕ ಹಿಂಬಾಲಿಸಿ ಚಿಕ್ಲಿಹೊಳೆ ಸಮೀಪ ಅಪಘಾತ ಮಾಡಿದ ಕಂಬಿಬಾಣೆಯ ಹರ್ಷದ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರಿನಲ್ಲಿದ್ದ ಮತ್ತೋರ್ವ ಯುವಕ ಶೌಕತ್ ಎಂಬಾತ ಪರಾರಿಯಾಗಿದ್ದಾನೆ.

ಘಟನೆ ಸಂದರ್ಭ ಅದೇ ಮಾರ್ಗವಾಗಿ ಬರುತ್ತಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಗಂಭೀರ ಗಾಯಗೊಂಡ ರಾಮಪ್ಪ ಅವರನ್ನು ಸಿದ್ದಾಪುರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ, ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಚಂದ್ರರಾಜು ಹಾಗೂ ರತೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ರಾಮಪ್ಪ ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಶೋಕಸಾಗರ

ರಾಮಪ್ಪ ಸಾವಿನ ಸುದ್ದಿ ತಿಳಿಯುತ್ತಿದಂತೆ ಸಿದ್ದಾಪುರ ಶವಾಗಾರಕ್ಕೆ ನೂರಾರು ಜನರು ಆಗಮಿಸಿದರು. ಕೃಷಿಕರಾಗಿರುವ ಮೃತ ರಾಮಪ್ಪ ಬಿಜೆಪಿ ಪಕ್ಷದಲ್ಲಿ ಅನೇಕ ವರ್ಷದಿಂದ ಸಕ್ರಿಯರಾಗಿದ್ದರು. ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಇವರು, ಈ ಹಿಂದೆ ಅಂಗಡಿಯನ್ನು ನಡೆಸಿದ್ದರು. ಹಾಗಾಗಿ ಎಲ್ಲರಿಗೆ ಚಿರಪರಿಚಿತರಾಗಿದ್ದ ರಾಮಪ್ಪ ಸಾವಿನಿಂದ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿದ್ದಾಪುರ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇಡಲಾಗಿದೆ.

ಘಟನೆಯನ್ನು ಬಿಜೆಪಿ ನಾಯಕರು, ಕಾರ್ಯಕರ್ತರು ಖಂಡಿಸಿದ್ದು, ಇದೊಂದು ಕೊಲೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಸಮಗ್ರ ತನಿಖೆ ಮೂಲಕ ಸತ್ಯಾಂಶ ಬಯಲಿಗೆಳೆಯಬೇಕೆಂದು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಮಡಿಕೇರಿ ಡಿವೈಎಸ್‌ಪಿ ಮಹೇಶ್ ಕುಮಾರ್ ಭೇಟಿ ನೀಡಿ ಮಹಜರು ನಡೆಸಿದರು.

ಸ್ಥಳೀಯ ಪೊಲೀಸರಿಂದ ಪ್ರಕರಣದ ಹಿನ್ನೆಲೆಯನ್ನು ಪಡೆದುಕೊಂಡಿರುವ ಉನ್ನತಾಧಿಕಾರಿಗಳು ತನಿಖೆ ಬಿರುಸುಗೊಳಿಸಿದ್ದಾರೆ. ಘಟನೆಯಿಂದ ಸಿದ್ದಾಪುರ ಗ್ರಾಮ ಬೂದಿ ಮುಚ್ಚಿದ ಕೆಂಡದAತಾಗಿದ್ದು, ಬಿಗುವಿನ ವಾತಾವರಣವೂ ಕೆಲಕಾಲ ಸೃಷ್ಟಿಯಾಗಿತ್ತು. ಪೊಲೀಸರು ಭದ್ರತೆಯನ್ನು ಹೆಚ್ಚಿಸಿ ಸಿದ್ದಾಪುರ ವ್ಯಾಪ್ತಿಯಲ್ಲಿ ಕಣ್ಗಾವಲ್ಲಿಟ್ಟಿದ್ದಾರೆ.