ಮಡಿಕೇರಿ, ಏ. ೧೮: ಧಾರ್ಮಿಕ ಕೇಂದ್ರಗಳ ಮೂಲಕ ಸಮಾನತೆಯ ಸಂದೇಶ ಸಾರುವಂತಾದಾಗ ಬದಲಾವಣೆ ಖಂಡಿತಾ ಸಾಧ್ಯವಿದೆ ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಅಭಿಪ್ರಾಯಪಟ್ಟರು.

ಸಾಮರಸ್ಯ ವೇದಿಕೆ ಕೊಡಗು ವತಿಯಿಂದ ನಗರದ ಭಾರತೀಯ ವಿದ್ಯಾ ಭವನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಅಸ್ಪೃಶ್ಯತೆ ವಿರುದ್ಧ ಸಮಾನತೆಗಾಗಿ ಏಕಾಂಗಿಯಾಗಿ ಹೋರಾಟ ಮಾಡಿದ್ದರು. ಅಂಬೇಡ್ಕರ್ ಅವರ ಕ್ರಾಂತಿಕಾರಿ ಹೋರಾಟದ ಪರಿಣಾಮವಾಗಿ ಇಂದು ಬದಲಾವಣೆಯತ್ತ ಸಾಗುತ್ತಿದ್ದೇವೆ, ಅಸ್ಪೃಶ್ಯತೆ ಎನ್ನುವುದು ಮಾನಸಿಕ ಬುದ್ಧಿಮಾಂದ್ಯತೆಯ ನಡತೆಯಾಗಿದೆ, ರಕ್ತ ನೀಡುವಾಗ ಯಾರೂ ಜಾತಿ ನೋಡುವುದಿಲ್ಲ, ವಿಶಾಲ ಮನೋಭಾವದವರು ಬದಲಾವಣೆಯ ಕಡೆಗೆ ಒಗ್ಗಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮೈಸೂರಿನ ಸಾಮಾಜಿಕ ನ್ಯಾಯವೇದಿಕೆಯ ಕಾರ್ಯದರ್ಶಿ ಪರಮಾನಂದ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿ, ಅಂಬೇಡ್ಕರ್ ಅವರು ಸ್ವಾರ್ಥಕ್ಕಿಂತ ದೇಶದ ಹಿತ ಮುಖ್ಯ ಎಂದು ಬದುಕಿದವರು. ಮನುಷ್ಯ ತನ್ನ ಗುಣದಿಂದ ದೈವತ್ವವನ್ನು ಪಡೆಯುತ್ತಾ ಹೋಗುತ್ತಾನೆ, ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ್ ಅವರು ಹೋರಾಟ ಮಾಡಿದರು. ಹಿಂದೂ ಧರ್ಮದ ಬಗ್ಗೆ ಯಾವುದೇ ಅಪನಂಬಿಕೆ ಅವರಲ್ಲಿ ಇರಲಿಲ್ಲ. ಹಿಂದೂ ಧರ್ಮದಲ್ಲಿದ್ದ ಅನಿಷ್ಟ ಪದ್ಧತಿಗಳ ಬಗ್ಗೆ ಅವರಲ್ಲಿ ಬೇಸರವಿತ್ತೇ ವಿನಹಃ ಯಾವುದೇ ಅಪನಂಬಿಕೆ ಇರಲಿಲ್ಲ. ೨೧ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಕಲ್ಪಿಸಿಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್. ಆದರೆ ಇಂದು ಅಂಬೇಡ್ಕರ್ ಅವರ ಚಿಂತನೆಯಲ್ಲಿ ಮತದಾನ ಆಗುತ್ತಿಲ್ಲ, ಹಣ, ಹೆಂಡಕ್ಕಾಗಿ ಮತದಾನವಾಗುತ್ತಿದ್ದು, ದೇಶದ ಹಿತ ಚಿಂತನೆಯಲ್ಲಿ ಮತದಾನ ಆಗಬೇಕಾದ

(ಮೊದಲ ಪುಟದಿಂದ) ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಕ್ಕುಡ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿಗಳಾದ ಹೆಚ್.ಎಸ್ ದೇವರಾಜ್ ಮಾತನಾಡಿ, ವಿಶ್ವಜ್ಞಾನ ದಿನಾಚರಣೆಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಇಡೀ ವಿಶ್ವವೇ ಅಂಬೇಡ್ಕರ್ ಅವರನ್ನು ಜ್ಞಾನಿ ಎಂಬುದಾಗಿ ಗುರುತಿಸಿದೆ ಎಂದರು.

ಸಿದ್ದಲಿAಗಪುರ ಅಳಿಲುಕೊಪ್ಪೆ ಶ್ರೀ ಕ್ಷೇತ್ರ ಮಂಜುನಾಥ ದೇವಸ್ಥಾನದ ಪ್ರಧಾನ ಗುರುಗಳಾದ ಶ್ರೀ ರಾಜೇಶ್ ಗುರೂಜಿಯವರು ಆಶೀರ್ವಚನ ನೀಡಿ ಪ್ರತಿಯೊಬ್ಬರೂ ಜಾತೀಯತೆಯನ್ನು ಬಿಟ್ಟು ವಿಶಾಲ ಹೃದಯದಿಂದ ಬದುಕುವಂತಾಗಬೇಕು. ಜಾತಿ ವ್ಯವಸ್ಥೆ ಆಧರಿಸಿ ಆಡಳಿತ ನಡೆಸುವ ಹುನ್ನಾರ, ಪಿತೂರಿಗಳು ನಡೆಯುತ್ತಿವೆ, ಎಲ್ಲರಿಗಾಗಿ ಸಂವಿಧಾನ ರಚನೆ ಆಗಿದ್ದು, ಎಲ್ಲರೂ ಸಮಾನರು ಎನ್ನುವ ಭಾವನೆಯಿಂದ ಬದುಕುವಂತಾಗಬೇಕು. ಜಾತಿ ವ್ಯವಸ್ಥೆಯಿಂದ ದೇಶ ಮತ್ತೆ ಪ್ರತ್ಯೇಕತೆಯೆಡೆಗೆ ಹೋಗಬಾರದು ಎಂದು ಅಭಿಪ್ರಾಯಪಟ್ಟರು. ಕುಶಾಲನಗರ ಜ್ಞಾನಭಾರತಿ ಶಾಲೆಯ ಶಿಕ್ಷಕಿ ಸಾಮರಸ್ಯ ಗೀತೆಯನ್ನು ಹಾಡಿದರು. ಸಾಮರಸ್ಯ ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕ ಹರೀಶ್ ತಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿದರು.