ಕೂಡಿಗೆ, ಏ. ೧೮: ಸುಡು ಬಿಸಿಲಿನ ಪರಿಣಾಮ ಅಂತರ್ಜಲದ ಮಟ್ಟ ಕುಸಿತದಿಂದಾಗಿ ತರಕಾರಿ ಬೆಲೆಯೂ ಇದೀಗ ಗಗನಕ್ಕೇರುತ್ತಿದೆ. ಕೊಳವೆ ಬಾವಿ ನೀರು ಆಶ್ರಯಿಸಿ ಹೆಚ್ಚು ತರಕಾರಿ ಬೆಳೆಯುವ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಈ ಬಾರಿ ತರಕಾರಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದ ಹಿನ್ನೆಲೆ ಈ ಪರಿಸ್ಥಿತಿಗೆ ಕಾರಣವಾಗಿದೆ. ಕೊಡಗು ಜಿಲ್ಲೆಗೆ ಹೆಚ್ಚು ತÀರಕಾರಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಭಾಗಗಳಿಂದ ಪೂರೈಕೆ ಆಗುವ ಹಿನ್ನೆಲೆಯಲ್ಲಿ ದಿನಕಳೆದಂತೆ ತರಕಾರಿ ಬೆಲೆಯು ಗಗನಕ್ಕೇರುತ್ತಿದೆ.
ದಿನಂಪ್ರತಿ ಆಹಾರ ತಯಾರಿಕೆಗೆ ಬೇಕಾಗುವ ಹಸಿ ಮೆಣಸಿನಕಾಯಿ, ಬೀನ್ಸ್ನ ಬೆಲೆಯು ಬಾರಿ ಹೆಚ್ಚಳ ಕಂಡಿದೆ. ಒಂದು ಕೆ.ಜಿೆ. ಹಸಿ ಮೆಣಸಿನಕಾಯಿ ಬೆಲೆ ಕಳೆದ ತಿಂಗಳಲ್ಲಿ ರೂ.೩೦ ಇದ್ದದ್ದು ಇದೀಗ ಮಾರುಕಟ್ಟೆಯಲ್ಲಿ ರೂ.೧೨೦ಕ್ಕೇರಿದೆ. ಅದರಂತೆಯೇ ಬೀನ್ಸ್ ಬೆಲೆಯು ಒಂದು ಕೆ.ಜಿ.ಗೆ ರೂ. ೮೦ ಇದ್ದದ್ದು ರೂ.೧೫೦ಕ್ಕೇರಿದೆ. ಬೆಂಡೆಕಾಯಿ ಮತ್ತು ಬದನೆಕಾಯಿ, ಅವರೆಕಾಯಿ, ನೂಕೋಲು ಬೆಲೆ ಸಹ ಒಂದು ಕೆ.ಜಿ.ಯ ಮೇಲೆ ೨೦ ರಿಂದ ೩೦ ರೂಗಳಷ್ಟು ಏರಿಕೆ ಕಂಡಿದ್ದು, ಮಳೆ ಬಾರದೆ ಪರಿಸ್ಥಿತಿ ಹಾಗೆ ಮುಂದುವರೆದರೆ ತರಕಾರಿ ಬೆಲೆ ಮತ್ತಷ್ಟು ದುಬಾರಿ ಆಗುವ ಸಾಧ್ಯತೆ ಇದೆ ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.- ಕೆ.ಕೆ. ನಾಗರಾಜಶೆಟ್ಟಿ