ಕಣಿವೆ, ಏ. ೧೮: ಆಧುನಿಕತೆ ಭರಾಟೆಯ ನಡುವಿನಲ್ಲಿ ತಂತ್ರಜ್ಞಾನದ ಫಲದಿಂದ ಬೆರಳ ತುದಿಯಲ್ಲಿ ವಿಶ್ವವನ್ನೇ ನೋಡುತ್ತಿರುವ ಈ ಹೊತ್ತಿನಲ್ಲಿ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಸದ್ದು - ಸುದ್ದಿಯಿಲ್ಲದೇ ಕೆಲಸಗಳಾಗುತ್ತಿವೆ ಎಂಬುದಕ್ಕೆ ಕೂಡ್ಲೂರು ಕೈಗಾರಿಕಾ ಬಡಾವಣೆಯ ಮುಖ್ಯ ಹೆದ್ದಾರಿಯಲ್ಲಿ ನಡೆದ ಪೌರಾಣಿಕ ನಾಟಕ ಪ್ರದರ್ಶನ ಸಾಕ್ಷಿಯಾಯಿತು. ಕೂಡ್ಲೂರು ನವ ಗ್ರಾಮದ ಬಸವೇಶ್ವರ ಮತ್ತು ದೊಡ್ಡಮ್ಮ ತಾಯಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ೧೦ ನೇ ವರ್ಷದ ಶ್ರೀ ಶನಿಪ್ರಭಾವ ಅಥವಾ ರಾಜವಿಕ್ರಮ ಎಂಬ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿತ್ತು. ಕಡುವಿನ ಹೊಸಹಳ್ಳಿ ಗ್ರಾಮದ ನಾಟಕ ಮಾಸ್ಟರ್ ಗೋವಿಂದೇಗೌಡ ಎಂಬವರು ನಾಟಕದ ತರಬೇತಿ ನೀಡುವ ಮೂಲಕ ಕೂಡ್ಲೂರು ಗ್ರಾಮದ ಕೈಗಾರಿಕಾ ಬಡಾವಣೆಯಲ್ಲಿ ಶನಿವಾರ ರಾತ್ರಿ ನಾಟಕವನ್ನು ಆಡಿಸಲಾಗಿತ್ತು. ಕೂಡ್ಲೂರಿನ ಕಾರ್ಮಿಕರು ನಾಟಕವಾಡಿ ಸೈ ಎನಿಸಿಕೊಂಡರು. ಕೂಡ್ಲೂರು ನವ ಗ್ರಾಮದ ನಿವಾಸಿಗಳಾದ ಆಟೋ ಚಾಲಕ ಮೂರ್ತಿ ಶನಿದೇವರ ಪಾತ್ರದಲ್ಲಿ ನಟಿಸಿದ್ದರೆ, ಕುಮಾರ್ ಎಂಬವರು ಸೇನಾಧಿಪತಿಯಾಗಿ, ನಂದೀಶ್ ನಾರದರ ಪಾತ್ರದಲ್ಲಿ, ಲಿಂಗರಾಜು ಈಶ್ವರನಾಗಿ, ಮಂಜು ಬಡಬ್ರಾಹ್ಮಣನಾಗಿ, ಗಣೇಶ್ ಏಳನೇ ಪುರೋಹಿತನಾಗಿ, ಅಂಗಡಿ ಸ್ವಾಮಿ ಮೃಗರಾಜ ನಾಗಿ, ಸುರೇಶ್ ಎರಡನೇ ವಿಕ್ರಮನಾಗಿ, ಧರ್ಮೇಶ ರಾವಣನಾಗಿ, ಮಂಜೇಗೌಡ ಚಂದ್ರಸೇನನಾಗಿ, ಮಿಥುನ್ ಬೇಟೆಗಾರನಾಗಿ, ಸಂಜು ಬೇಟೆಗಾರ ಗ್ರಹವಾಗಿ, ಟಿ.ಎನ್. ಅಶೋಕ್ ಅಲೋಲಕಿಯಾಗಿ, ಸತೀಶ ಮಾಯಾಶನಿಯಾಗಿ ನಾಟಕದಲ್ಲಿ ಅಭಿನಯಿಸಿದರು ನೆರೆದಿದ್ದವರಿಗೆ ನಾಟಕ ಹೊಸ ಅನುಭವ ಮೂಡಿಸಿತು.