ವೀರಾಜಪೇಟೆ, ಏ. ೧೭: ಹಲವಾರು ಕಲಾವಿದರು ರಂಗಭೂಮಿಯ ನಂಟು ಹೊಂದಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಹೆಸರುವಾಸಿಯಾಗಿದ್ದಾರೆ. ಮಕ್ಕಳಲ್ಲಿ ಹುದುಗಿರುವ ಬಹುಮುಖ ಪ್ರತಿಭೆಯನ್ನು ಪ್ರದರ್ಶನ ಮಾಡಲು ಶಿಬಿರಗಳು ಸಹಕಾರಿಯಾಗಿವೆ ಎಂದು ರೋಟರಿ ಸಂಸ್ಥೆ ವೀರಾಜಪೇಟೆಯ ಚೇರ್ಮೆನ್ ಮತ್ತು ವಕೀಲರಾದ ಬಿ.ಬಿ.ಮಾದಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆ ವೀರಾಜಪೇಟೆ ಮತ್ತು ಸಾದಿಕ್ ಆರ್ಟ್ಸ್ ಲಿಂಕ್ಸ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ಕಲಾ ಉತ್ಸವ ಕೊಡಗು ೨೦೨೪ ಪ್ರಯುಕ್ತ ಮಕ್ಕಳ ನಟನೆ ಮತ್ತು ರಂಗಭೂಮಿ ಮೂರು ದಿನಗಳ ಕಾರ್ಯಾಗಾರ ರೋಟರಿ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಬಿ.ಬಿ. ಮಾದಪ್ಪ ಅವರು ಜಿಲ್ಲೆಯಲ್ಲಿ ಹಾಕಿ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಮಕ್ಕಳ ಬಹುಮುಖ ಪ್ರತಿಭೆಗಳನ್ನು ಅನಾವರಣ ಮಾಡಲು ಶಿಬಿರದ ಆಯೋಜನೆ ಮಾಡಲಾಗಿರುವುದು ಶ್ಲಾಘನೀಯ ಎಂದರು.
ಮೈಸೂರು ರಂಗ ನಿರ್ದೇಶಕರಾದ ಕಾತ್ಯಾಯಿನಿ ಯಶೋಮಿತ್ರ ಅವರು ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳಿಂದ ರಂಗ ಗೀತೆಗಳು ಮತ್ತು ಪರಿಸರ ಕುರಿತ ನಾಟಕ ಪ್ರದರ್ಶನಗೊಂಡವು.
ಕಾರ್ಯಕ್ರಮದ ವೇದಿಕೆಯಲ್ಲಿ ಸಾದಿಕ್ ಆರ್ಟ್ಸ್ ಲಿಂಕ್ ಮತ್ತು ಶಿಬಿರ ಆಯೋಜಕರಾದ ಸಾಧಿಕ್ ಹಂಸ, ಹೆಚ್.ಡಿ. ಕೋಟೆ ಡಿ.ಸಾಲುಂಡಿ ಶಾಲೆಯ ರಂಗಶಿಕ್ಷಕ ಮತ್ತು ಶಿಬಿರ ತರಬೇತಿದಾರರಾದ ತ್ಯಾಗರಾಜ್ ದೇವರಹಳ್ಳಿ, ಮತ್ತು ರೋಟರಿ ಶಾಲೆಯ ಶಿಕ್ಷಕಿಯಾದ ರೇಶ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳ ಪೋಷಕರು, ಶಾಲಾ ವಿಧ್ಯಾರ್ಥಿಗಳು, ರೋಟರಿ ಶಾಲೆಯ ಶಿಕ್ಷಕ ವೃಂದ ಮತ್ತು ಬೋದಕೇತರ ಸಿಬ್ಬಂದಿಗಳು ಹಾಜರಿದ್ದರು.