ಪೊನ್ನಂಪೇಟೆ, ಏ. ೧೬: ಭೂಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿಗೆ ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ರದ್ದುಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ದಲಿತ ಸಂಘಟನೆ, ಕಾರ್ಮಿಕ ಸಂಘಟನೆ, ಆಧಿವಾಸಿ ಮೂಲ ನಿವಾಸಿಗಳ ಸಂಘಟನೆಗಳ ಜಂಟಿ ವೇದಿಕೆಯಾದ ಕೊಡಗು ಜಿಲ್ಲಾ ಭೂಗುತ್ತಿಗೆ ವಿರೋಧಿ ಐಕ್ಯ ಹೋರಾಟ ಸಮಿತಿ ಪೊನ್ನಂಪೇಟೆ ತಾಲೂಕು ಆಡಳಿತ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿತು.

ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮುಖಾಂತರ ಕಾಯ್ದೆ ತಿದ್ದುಪಡಿ ರದ್ದುಗೊಳಿಸುವಂತೆ ಮನವಿ ಪತ್ರವನ್ನು ಈ ಸಂದರ್ಭ ಸಲ್ಲಿಸಲಾಯಿತು.ಈ ತಿದ್ದುಪಡಿಯಿಂದ ಭೂಮಿಯನ್ನು ಹೊಂದದೆ ಇರುವ ಆಧಿವಾಸಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಜತೆಗೆ, ಭೂಮಿ ಹೊಂದದೇ ಇರುವ ಮೇಲ್ವರ್ಗದ ಬಡಜನರಿಗೆ ಅನ್ಯಾಯವಾಗಲಿದೆ. ಮುಂದೆ ಭೂರಹಿ ತರಿಗೆ ಸರ್ಕಾರಿ ಭೂಮಿ ಹೊಂದಲು ಅವಕಾಶವೇ ಸಿಗದಂತಾಗುತ್ತದೆ. ಈ ವಿಚಾರವಾಗಿ ಸರ್ಕಾರಿ ಜಮೀನನ್ನು ಭೂಮಾಲೀಕರಿಗೆ ಗುತ್ತಿಗೆ ನೀಡುವುದನ್ನು ವಿರೋಧಿಸಿ ಹೋರಾಟ ನಡೆಸಲಾ ಗುತ್ತದೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದು, ಒತ್ತುವರಿಗೊಂಡ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಿ ಪೈಸಾರಿ ಹಾಗೂ ಲೈನ್ ಮನೆಗಳಲ್ಲಿ ವಾಸಮಾಡುವವರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಲಾಯಿತು.

ಪ್ರದಾನ ಸಂಚಾಲಕರುಗಳಾದ ಹೆಚ್.ಎಸ್. ಕೃಷ್ಣಪ್ಪ, ರಮೇಶ್ ಮಾಯಮುಡಿ, ವೈ.ಕೆ ಗಣೇಶ್, ಹೆಚ್.ಆರ್ ಪರಶುರಾಮ್, ಹೆಚ್.ಆರ್. ಶಿವಣ್ಣ, ಕಾಟಿ ಮುರುಗ ಸೇರಿದಂತೆ ಭೂರಹಿತರು, ವಸತಿ ರಹಿತರು ಪ್ರತಿಭಟನೆಯನ್ನು ಭಾಗಿಯಾದರು.