ಸೋಮವಾರಪೇಟೆ, ಏ. ೧೬: ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ತಾ. ೧೭ರಂದು (ಇಂದು) ಪಟ್ಟಣದಲ್ಲಿ ಆಯೋಜನೆಗೊಂಡಿರುವ ಶ್ರೀರಾಮನವಮಿ ಉತ್ಸವವನ್ನು ಕಾನೂನು ಪಾಲನೆಯೊಂದಿಗೆ ಸುಸೂತ್ರವಾಗಿ ನಡೆಸಬೇಕೆಂದು ಡಿವೈಎಸ್‌ಪಿ ಗಂಗಾಧರಪ್ಪ ಅವರು ನಿರ್ದೇಶನ ನೀಡಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಡಿವೈಎಸ್‌ಪಿ ಗಂಗಾಧರಪ್ಪ ಅವರು, ಉತ್ಸವದ ಆಯೋಜಕರು, ಸ್ತಬ್ಧಚಿತ್ರಗಳ ಆಯೋಜಕರಿಗೆ ಈ ಬಗ್ಗೆ ನಿರ್ದೇಶನ ನೀಡಿದರು.

ಚುನಾವಣೆ ನೀತಿ ಸಂಹಿತೆ ಇರುವ ಹಿನ್ನೆಲೆ ಚುನಾವಣಾ ಆಯೋಗದ ನಿಯಮಗಳನ್ನು ಪಾಲಿಸಿಕೊಂಡು ಉತ್ಸವ ನಡೆಸಬೇಕು. ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಬೇಕು ಎಂದು ಗಂಗಾಧರಪ್ಪ ಅವರು ಸೂಚಿಸಿದರು.

ನಿಗದಿತ ಸಮಯದಲ್ಲಿ ಸ್ತಬ್ಧಚಿತ್ರ ಹೊರಟು ಮೆರವಣಿಗೆ ಮುಗಿಸಿ ವಾಪಸ್ ಬರಬೇಕು. ಶಬ್ದಮಾಲಿನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಧಿಕ ಶಬ್ದ ಹೊರಹಾಕುವ ಸೌಂಡ್ಸ್ಗಳನ್ನು ಬಳಸಬಾರದು. ಸ್ತಬ್ಧಚಿತ್ರಗಳ ಮೆರವಣಿಗೆ ಸಂದರ್ಭ ತಂಡಗಳ ನಡುವೆ ಹೊಂದಾಣಿಕೆ ಮೂಡಿಸಬೇಕು. ಅನಗತ್ಯವಾಗಿ ಸಮಯ ವ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಡಿವೈಎಸ್‌ಪಿ ತಿಳಿಸಿದರು.

ಪಟ್ಟಣ ಸಮೀಪದ ಗ್ರಾಮಾಂತರ ಭಾಗಗಳಿಂದ ೧೦ ಸ್ತಬ್ಧಚಿತ್ರಗಳ ಆಗಮಿಸುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಒದಗಿಸಬೇಕೆಂದು ವೇದಿಕೆಯ ದರ್ಶನ್ ಜೋಯಪ್ಪ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಡಿವೈಎಸ್‌ಪಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗುವುದು ಎಂದರು.

ವೇದಿಕೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಸಂತ್, ಠಾಣಾಧಿಕಾರಿಗಳಾದ ರಮೇಶ್‌ಕುಮಾರ್, ಪ್ರಹ್ಲಾದ್ ಅವರುಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಸುಭಾಷ್ ತಿಮ್ಮಯ್ಯ, ಎಂ.ಬಿ. ಉಮೇಶ್, ಹೇಮಂತ್, ಸುರೇಶ್, ಶಶಿಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.