ಹೆಚ್.ಕೆ.ಜಗದೀಶ್

ಗೋಣಿಕೊಪ್ಪಲು, ಏ. ೧೫: ತನ್ನ ಮನೆಯ ಮುಂಭಾಗದ ರಸ್ತೆಯಲ್ಲಿ ವಾಯು ವಿಹಾರ ಮಾಡುವ ಸಂದರ್ಭ ಕಾಡಾನೆ ಅಮಾಯಕ ವ್ಯಕ್ತಿಯ ಮೇಲೆ ದಾಳಿ ನಡೆಸಿ ವ್ಯಕ್ತಿಯನ್ನು ಕೊಂದು ಹಾಕಿದ ಘಟನೆ ಶ್ರೀಮಂಗಲ ಹೋಬಳಿಯ ಬೀರುಗ ಗ್ರಾಮದಲ್ಲಿ ನಡೆದಿದೆ. ಕಾಡಾನೆ ಅಯ್ಯಮಾಡ ಮಾದಯ್ಯ(೬೩) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿ.

ತನ್ನ ಮನೆಯಿಂದ ಮುಂಜಾನೆ ೬.೪೫ರ ಸುಮಾರಿಗೆ ಬೀರುಗ - ಪಾಚಿಬೇಲ್ ಮುಖ್ಯ ರಸ್ತೆಯಲ್ಲಿ ‘ವಾಕಿಂಗ್’ಗೆ ತೆರಳುತ್ತಿದ್ದ ವೇಳೆ ಎದುರಿನಿಂದ ದಿಢೀರನೆ ಎದುರಾದ ಕಾಡಾನೆಯನ್ನು ಕಂಡು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ರಸ್ತೆ ಬದಿಯ ಬರೆಯ ಮೇಲೆ ಹತ್ತುವ ಪ್ರಯತ್ನ ಮಾಡಿದ್ದಾರೆ. ಆದರೆ ಬರೆ ಹತ್ತುವ ಸಂದರ್ಭದಲ್ಲಿ ಆನೆಯು ತನ್ನ ಸೊಂಡಿಲಿನಿAದ ಆತನ ಕಾಲು ಎಳೆದು ರಸ್ತೆಗೆ ಬಿಸಾಡಿದೆ. ಈ ವೇಳೆ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗ್ರಾಮದ ರೈತ ಕಾಡಾನೆ ದಾಳಿಯಿಂದ ಮೃತಪಟ್ಟ ವಿಷಯ ತಿಳಿದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕಿದರು. ಅಲ್ಲದೆ ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಆನೆಯನ್ನು ಕೂಡಲೇ ಸೆರೆ ಹಿಡಿಯಬೇಕು ಎಂದು ಆಗ್ರಹಿಸಿ, ಅಧಿಕಾರಿಗಳಿಗೆ ಘೆರಾವು ಹಾಕುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮುಂಜಾನೆಯಿAದಲೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ರೈತ ಮುಖಂಡರು ಹಿರಿಯ ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಮಧ್ಯಾಹ್ನದ ವೇಳೆ ದ.ಕೊಡಗಿನ ಬೀರುಗ ಬಳಿ ಘಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ನೆರೆದಿದ್ದ ಗ್ರಾಮಸ್ಥರ ಹಾಗೂ ರೈತರ ಆಕ್ರೋಶ, ಅಸಮಾಧಾನ ಮತ್ತಷ್ಟು ಹೆಚ್ಚಾಯಿತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಸಿಸಿಎಫ್ ಮನೋಜ್ ಕುಮಾರ್ ತ್ರಿಪಾಠಿ, ವೀರಾಜಪೇಟೆ ಡಿಎಫ್‌ಒ ಜಗನ್ನಾಥ್ ಮೇಲೆ ಹರಿಹಾಯ್ದರು. ಇಂದಿನ ಘಟನೆಗೆ ಅರಣ್ಯ ಇಲಾಖೆ ನೇರ ಹೊಣೆ ಎಂದ ಪ್ರತಿಭಟನಾಕಾರರು ಆರೋಪಿಸಿದರು. ನಿಮ್ಮ ಮೇಲೆ ಪೊಲೀಸ್ ಮೊಕದಮ್ಮೆ ದಾಖಲಿಸುತ್ತೇವೆ ಎಂದು ಸ್ಥಳೀಯ ರೈತ ಮುಖಂಡರಾದ ಅಜ್ಜಮಾಡ ಚಂಗಪ್ಪ ಅಧಿಕಾರಿಗಳ ಮೇಲೆ ತಮ್ಮ ಅಸಮಧಾನ ಹೊರಹಾಕಿದರು. ತಕ್ಷಣ ಕಾಡಾನೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

(ಮೊದಲ ಪುಟದಿಂದ) ಗ್ರಾಮಸ್ಥರ ಮಾತಿಗೆ ಒಪ್ಪಿದ ಸಿಸಿಎಫ್ ಮನೋಜ್ ತ್ರಿಪಾಠಿ ಈಗಾಗಲೇ ಶನಿವಾರಸಂತೆ ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ ತಂಡ ಕರ್ತವ್ಯ ನಿರ್ವಹಿಸುತ್ತಿದೆ. ಈ ತಂಡವನ್ನು ಕರೆಸುವ ಪ್ರಯತ್ನ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭ ಅಧಿಕಾರಿಗಳ ಮಾತಿಗೆ ಅಸಮಧಾನಗೊಂಡ ರೈತ ಮುಖಂಡರು ತಕ್ಷಣವೇ ತಂಡವನ್ನು ಕರೆಸಿ ಕಾಡಾನೆಯನ್ನು ಸೆರೆ ಹಿಡಿಯಲು ಪಟ್ಟು ಹಿಡಿದರು.

ಘಟನಾ ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ವಿಭಾಗದ ಪ್ರಭಾರ ಡಿಎಫ್‌ಒ ಭಾಸ್ಕರ್ ಮೃತ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ರೂ. ೧೫ ಲಕ್ಷದ ಪರಿಹಾರ ಚೆಕ್ಕನ್ನು ಪತ್ನಿ ಲಲಿತ (ಶೈಲ) ಅವರಿಗೆ ಹಸ್ತಾಂತರ ಮಾಡಿದರು. ಮೊದಲ ಹಂತದಲ್ಲಿ ರೂ. ೫ ಲಕ್ಷ ಹಾಗೂ ೨ನೇಯ ಹಂತದಲ್ಲಿ ರೂ. ೧೦ ಲಕ್ಷ ಚೆಕ್ ನೀಡಲಾಯಿತು. ೫ ವರ್ಷಗಳವರೆಗೆ ಮಾಸಿಕ ರೂ. ೪ ಸಾವಿರ ಮಾಸಾಶನ ಮಂಜೂರು ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಈ ವೇಳೆ ವಿಧಾನಪರಿಷತ್ತಿನ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಎಸಿಎಫ್ ನೆಹರು ರೈತ ಸಂಘದ ಪ್ರಮುಖರು ಉಪಸ್ಥಿತರಿದ್ದರು. ಕಾಡಾನೆಗಳನ್ನು ತಕ್ಷಣದಿಂದಲೇ ಅರಣ್ಯಕ್ಕೆ ಅಟ್ಟುವ ಭರವಸೆಯ ಹಿನ್ನಲೆಯಲ್ಲಿ ಗ್ರಾಮಸ್ಥರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಒಪ್ಪಿಗೆ ನೀಡಿದರು. ಪೊನ್ನಂಪೇಟೆ ಅರಣ್ಯ ವಲಯದ ಆರ್‌ಎಫ್‌ಒ ಶಂಕರ್ ಹಾಗೂ ಇತರ ಅಧಿಕಾರಿಗಳು ಮೃತ ದೇಹವನ್ನು ಗ್ರಾಮಸ್ಥರ ಸಹಕಾರದಿಂದ ಮರಣೋತ್ತರ ಪರೀಕ್ಷೆಗೆ ಸಾಗಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಕಾಳಿಮಾಡ ಪ್ರಶಾಂತ್,ಗ್ರಾಮಸ್ಥರ ಕೋರಿಕೆಯಂತೆ ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡರು. ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸ್ಥಳದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪಲ್ವಿನ್ ಪೂಣಚ್ಚ, ಸ್ಥಳೀಯರಾದ ಮಚ್ಚಮಾಡ ಉದಯ, ರೈತ ಸಂಘದ ಕಾರ್ಯದರ್ಶಿ ಚಂಗುಲAಡ ರಾಜಪ್ಪ,ರಾಜ್ಯ ಸಮಿತಿ ಸದಸ್ಯ ಡಿ.ಎಸ್. ಲೋಕೇಶ್, ಅಯ್ಯಮಾಡ ಸೋಮೇಶ್, ವಕೀಲ ಎಂ.ಟಿ.ಕಾರ್ಯಪ್ಪ, ಶ್ರೀಮಂಗಲ ವಿಎಸ್‌ಎಸ್‌ಎನ್ ಉಪಾಧ್ಯಕ್ಷರಾದ ಅಯ್ಯಮಾಡ ಉದಯ,ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ, ಸದಸ್ಯರಾದ ರಾಜು, ಸಾವಿತ್ರಿ, ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಚ್ಚಮಾಡ ಸುಮಂತ್ ಸೇರಿದಂತೆ ಹಲವು ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

ಬ್ರಹ್ಮಗಿರಿ ತಪ್ಪಲಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊAಡತಿರುವ ದ.ಕೊಡಗಿನ ಶ್ರೀಮಂಗಲ,ಕುರ್ಚಿ, ಬೀರುಗ, ತೆರಾಲು, ಬಿರುನಾಣಿ ಸೇರಿದಂತೆ ಹಲವು ಭಾಗದಲ್ಲಿ ನಿರಂತರ ಕಾಡಾನೆಯ ಉಪಟಳವಿದ್ದು ರೈತರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಆಗಿಂದಾಗಿಯೇ ಕಾಡಾನೆಗಳು ಕಾರ್ಮಿಕರ, ರೈತರ ಮೇಲೆ ದಾಳಿ ನಡೆಸುವುದು ನಡೆಯುತ್ತಲೇ ಇದೆ. ಗ್ರಾಮಸ್ಥರ ಮಾಹಿತಿಯಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ೪೦ಕ್ಕೂ ಹೆಚ್ಚಿನ ಕಾಡಾನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದು ಬೆಳೆಗಾರರು ವನ್ಯ ಪ್ರಾಣಿಗಳ ಉಪಟಳದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೃತ ಮಾದಯ್ಯ ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.