ಎಂ.ಎನ್. ಚಂದ್ರಮೋಹನ್

ಕುಶಾಲನಗರ, ಏ. ೧೫: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟೆಚ್ಚರ ವಹಿಸಲು ಜಿಲ್ಲೆಗಳ ಗಡಿ ಭಾಗಗಳಲ್ಲಿ ವಾಹನ ತಪಾಸಣಾ ಕೇಂದ್ರಗಳನ್ನು ನಿರ್ಮಿಸಿ ದಿನದ ೨೪ ಗಂಟೆಗಳ ಕಾಲ ಚುನಾವಣಾ ಅಧಿಕಾರಿಗಳ ತಂಡ ತಪಾಸಣೆ ಕಾರ್ಯ ನಿರಂತರವಾಗಿ ನಡೆಸುತ್ತಿದೆ.

ಯಾವುದೇ ರೀತಿಯಲ್ಲಿ ಅಕ್ರಮ ಹಣ ಸಾಗಾಟ, ಸಮರ್ಪಕ ದಾಖಲೆಗಳಿಲ್ಲದೆ ಚುನಾವಣಾ ಸಾಮಗ್ರಿಗಳ ಸಾಗಿಸುವ ಸಂದರ್ಭ ಪರಿಶೀಲನೆಗೆಂದು ಚುನಾವಣಾ ಆಯೋಗ ಕೊಡಗು ಜಿಲ್ಲೆಗೆ ಆಗಮಿಸುವ ವಾಹನಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಸುತ್ತಿದೆ.

ಕುಶಾಲನಗರದ ಗಡಿಭಾಗ ದಲ್ಲಿ ಚುನಾವಣಾ ಅಧಿಕಾರಿ ಸಿಬ್ಬಂದಿಗಳ ತಂಡ ವಾಹನ ತಪಾಸಣಾ ಕೇಂದ್ರ ತೆರೆದಿದ್ದು ಕಳೆದ ಹಲವು ದಿನಗಳಿಂದ ನಿತ್ಯ ವಾಹನಗಳು ಕಿಲೋಮೀಟರ್ ದೂರದ ತನಕ ಸಾಲಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ವಾಹನಗಳ ತಪಾಸಣೆ ಸಂದರ್ಭ ಉದ್ದಕ್ಕೂ ಸಾಲಾಗಿ ವಾಹನಗಳು ನಿಲ್ಲುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನಾನು ಕೂಲತೆ ಉಂಟಾಗುತ್ತಿದೆ ಎನ್ನುವ ದೂರುಗಳು ಆಗಾಗ್ಗೆ ಕೇಳಿ ಬರುತ್ತಿದೆ.

ಕಾವೇರಿ ನದಿ ಸೇತುವೆ ಮೇಲ್ಭಾಗದಲ್ಲಿ ಭಾರಿ ಪ್ರಮಾಣದ ಭಾರ ಹೊತ್ತ ಲಾರಿಗಳು, ಬಸ್ಸುಗಳು, ಬೃಹತ್ ಗಾತ್ರದ ವಾಹನಗಳು ನಿಲ್ಲುವ ಕಾರಣ ಸೇತುವೆಗೆ ಅಪಾಯದ ಸಾಧ್ಯತೆಯೂ ಅಧಿಕ ಎನ್ನುವ ಮಾತು ಕೇಳಿ ಬಂದಿದೆ.

ವಾರಾಂತ್ಯದ ಸಂದರ್ಭ ಕೊಪ್ಪ ಕಡೆಯಿಂದ ಅರಣ್ಯ ತಪಾಸಣಾ ಕೇಂದ್ರದ ಸಮೀಪಕ್ಕೆ ವಾಹನ ತಲುಪಲು ಸುಮಾರು ೩೦ ರಿಂದ ೪೦ ನಿಮಿಷಗಳ ಕಾಲ ವ್ಯಯವಾಗುತ್ತಿದ್ದು ಇದನ್ನು ತಪ್ಪಿಸಲು ಪರ್ಯಾಯ ವ್ಯವಸ್ಥೆ ಅಗತ್ಯವಾಗಿದೆ.

ಈ ನಡುವೆ ತುರ್ತು ವಾಹನಗಳ ಸಂಚಾರಕ್ಕೆ ಕೂಡ ಅಡ್ಡಿ ಉಂಟಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ. ಇಲ್ಲಿ ವಿಶೇಷ ಏನೆಂದರೆ ಅತಿ ಗಣ್ಯರು, ಹಿರಿಯ ಅಧಿಕಾರಿಗಳು ಈ ಮೂಲಕ ಪ್ರಯಾಣಿಸುವ ಸಂದರ್ಭ ಮಾತ್ರ ಅಧಿಕಾರಿಗಳು ಅವರ ವಾಹನಗಳನ್ನು ಸರಾಗವಾಗಿ ಸಂಚರಿಸಲು ಅನುವು ಮಾಡಿ ಕೊಡುವ ಮೂಲಕ ಸಮಸ್ಯೆಯ ಅರಿವು ಉಂಟಾಗದAತೆ ನೋಡಿಕೊಳ್ಳುವ ವ್ಯವಸ್ಥೆ ಕೂಡ ನಡೆಯುತ್ತಿದೆ.

ಈ ಕೇಂದ್ರದ ಬಳಿ ಎರಡು ಸೇತುವೆಗಳಿದ್ದು ಹಳೆಯ ಸೇತುವೆಯನ್ನು ಪರಿಶೀಲನೆಗೆ ಒಳಪಡಿಸಿ ಸಂಚಾರಕ್ಕೆ ಬಳಸಿದಲ್ಲಿ ಈ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಲಿದೆ ಎನ್ನುತ್ತಾರೆ ವಾಹನ ಚಾಲಕರಾದ ನಾರಾಯಣ ಎಂಬವರು.

(ಮೊದಲ ಪುಟದಿಂದ) ಎರಡೂ ಜಿಲ್ಲೆಗಳ ಗಡಿ ಭಾಗಗಳಿಂದ ಓಡಾಡುವ ವಾಹನ ಚಾಲಕರಿಗೆ ನಿತ್ಯ ಇದೊಂದು ನರಕ ಸದೃಶವಾಗಿ ಪರಿಣಮಿಸಿದ್ದು, ದಿನನಿತ್ಯದ ವ್ಯಾಪಾರ ವಹಿವಾಟುಗಳಿಗೆ ಕೂಡ ಭಾರಿ ಅಡ್ಡಿ ಉಂಟಾಗುತ್ತಿದೆ.

ಅರಣ್ಯ ತಪಾಸಣಾ ಕೇಂದ್ರದ ಬಳಿ ಇರುವ ಪ್ರದೇಶವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಸಂಚಾರ ತೊಡಕನ್ನು ಸರಿಪಡಿಸಲು ಸಾಧ್ಯವಿದ್ದರೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ದಿವ್ಯ ಮೌನ ವಹಿಸಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ಒಂದೆಡೆ ಚರಂಡಿಯಿAದ ಬಂದು ಸೇರುವ ಕಲುಷಿತ ನೀರು ತುಂಬಿಸಲು ನಿರ್ಮಾಣವಾಗಿರುವ ಬೃಹತ್ ಟ್ಯಾಂಕ್ ಅಳವಡಿಕೆ, ಪಕ್ಕದಲ್ಲಿ ಕೊರೊನಾ ಸಂದರ್ಭ ಕರ್ತವ್ಯ ನಿರ್ವಹಿಸಲು ನಿರ್ಮಾಣವಾಗಿರುವ ಬೃಹತ್ ಗಾತ್ರದ ಅವೈಜ್ಞಾನಿಕವಾಗಿರುವ ಕಬ್ಬಿಣದ ಬಾಕ್ಸ್, ಅಲ್ಲದೆ ಯಾವುದೇ ಪ್ರಯೋಜನವಿಲ್ಲದೆ ಇದ್ದರೂ ಕಳೆದ ಹಲವಾರು ವರ್ಷಗಳಿಂದ ಅರಣ್ಯ ಇಲಾಖೆ ಮೂಲಕ ನಿರ್ಮಾಣಗೊಂಡಿರುವ ಬೃಹತ್ ಕಬ್ಬಿಣದ ಅಪಾಯಕಾರಿ ಗೇಟ್.. ಇವುಗಳನ್ನು ತೆರೆವುಗೊಳಿಸಿದಲ್ಲಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲು ಸಾಧ್ಯ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಸ್ಥಳೀಯ ಹಾಗೂ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಕೆಲವೇ ಅವಧಿಯಲ್ಲಿ ವರ್ಗಾವಣೆಗೊಳ್ಳುತ್ತಿದ್ದು ಇಂತಹ ಸಮಸ್ಯೆಗಳ ಪರಿಹಾರ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗದೆ ಇರುವುದು ಇಂತಹ ನಿತ್ಯ ನಿರಂತರ ಸಮಸ್ಯೆಗಳು ಮುಂದುವರಿಯಲು ಕಾರಣವಾಗಿದೆ.

ಆದಷ್ಟು ಶೀಘ್ರದಲ್ಲಿ ಕುಶಾಲನಗರ ಗಡಿಭಾಗದಲ್ಲಿ ಚುನಾವಣೆ ಮತ್ತು ಇತರ ಸಂದರ್ಭಗಳಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಗುವ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಸ್ಥಳೀಯ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ವಾಹನ ಚಾಲಕರು ಮತ್ತು ಸಾರ್ವಜನಿಕರ ಆಗ್ರಹವಾಗಿದೆ.