ವೀರಾಜಪೇಟೆ, ಏ. ೧೫: ಶರೀರವನ್ನು ಸದೃಢವಾಗಿ ಕಾಯ್ದು ಕೊಳ್ಳಲು ಹಾಗೂ ಶಕ್ತಿಯುತವಾಗಿ ಸಮರ್ಥವಾಗಿ ಇರಲು ಕ್ರೀಡೆ ಅತ್ಯಂತ ಮುಖ್ಯ ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ವೀರಾಜಪೇಟೆ ಸಮೀಪದ ಚಾಮಿಯಾಲ ಗ್ರಾಮದಲ್ಲಿ ಕೂವಲೇರ ಕುಟುಂಬ ಆಯೋಜಿಸಿರುವ ಕೊಡವ ಮುಸ್ಲಿಂ ಕ್ರಿಕೆಟ್ ಹಬ್ಬದಲ್ಲಿ ಪಂದ್ಯಾಟವನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಕೊಡಗಿನಲ್ಲಿ ಕ್ರೀಡೆ ಪ್ರಮುಖವಾಗಿದ್ದು ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ, ಸ್ಪರ್ಧೆಗಳು ಇಂದು ನಡೆಯುತ್ತಿವೆ. ಹೀಗೆ ಇತರ ಅನೇಕ ಕ್ರೀಡಾಕೂಟ ಗಳನ್ನು ಕೊಡಗಿನಲ್ಲಿ ಇಂದು ಕಾಣುತ್ತಿದ್ದೇವೆ. ಇದು ಸಾಮಾಜಿಕ ಸಂಘಟನೆ ಜೊತೆಗೆ ಕುಟುಂಬಗಳನ್ನು ಬೆಸೆಯುತ್ತದೆ. ಅಲ್ಲದೆ ಪ್ರಮುಖವಾಗಿ ಅನೇಕ ಯುವ ಪ್ರತಿಭೆಗಳನ್ನು ಈ ಮೂಲಕ ಹೊರತರಲು ಸಹಕಾರಿ ಯಾಗುತ್ತದೆ. ಕೊಡವ ಮುಸ್ಲಿಂ ಜನಾಂಗ ಕ್ರಿಕೆಟ್ ಆಟವನ್ನು ಆಯೋಜನೆ ಮಾಡಿರುವುದು ಸಂತಸದ ವಿಚಾರ ಎಂದರು.

(ಮೊದಲ ಪುಟದಿಂದ) ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಕೊಳಕೇರಿಯ ವರ್ತಕರಾದ ಹ್ಯಾರೀಸ್, ಕೊಡಗು ಮುಸ್ಲಿಂ ಕಪ್ ಆಯೋಜಕರಾದ ಕುಪೊಡಂಡ ಅಬ್ದುಲ್ ರಶೀದ್ ಹಾಗೂ ಹಿರಿಯರಾದ ಹನೀಫ್ ಸಭೆಯಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೂವಲೇರ ಕುಟುಂಬ ಮುಸ್ಲಿಂ ಕ್ರಿಕೆಟ್ ಪಂದ್ಯಾಟದ ಸಮಿತಿಯ ಅಧ್ಯಕ್ಷ ಕೂವಲೇರ ಹನೀಸ್ ಮಾತನಾಡಿ, ಈ ಕ್ರೀಡಾಕೂಟದಲ್ಲಿ ೬೪ ತಂಡಗಳು ಭಾಗವಹಿಸುತ್ತಿದ್ದು, ತಾ. ೨೧ ರವರಗೆ ಪಂದ್ಯಾಟ ನಡೆಯಲಿದೆ. ವಿಜೇತ ತಂಡಕ್ಕೆ ಒಂದು ಲಕ್ಷ ರೂ ನಗದು ಬಹುಮಾನ ಮತ್ತು ರನ್ರ‍್ಸ್ಗೆ ೫೦ ಸಾವಿರ ನಗದು ಮತ್ತು ಮೂರನೇ ನಾಲ್ಕನೇ ಬಹುಮಾನ ಸೇರಿದಂತೆ ವಿವಿಧ ಬಹುಮಾನಗಳಿರುತ್ತದೆ ಎಂದು ಪಂದ್ಯಾಟದ ವಿವರಗಳನ್ನು ನೀಡಿದರು.