ಕಣಿವೆ. ಏ. ೧೦: ಕಂದಕದಲ್ಲಿ ಸಿಲುಕಿದ್ದ ಕಾಡಾನೆಯೊಂದನ್ನು ಕುಶಾಲನಗರ ವಲಯ ಅರಣ್ಯ ಸಿಬ್ಬಂದಿಗಳು ರಕ್ಷಿಸಿ ಕಾಡಿಗಟ್ಟಿದ ಪ್ರಸಂಗ ಬುಧವಾರ ಬೆಳಗ್ಗೆ ನಡೆಯಿತು.
ಗುಡ್ಡೆಹೊಸೂರು ಬಳಿಯ ಚಿಕ್ಕಬೆಟ್ಟಗೇರಿಯ ಕೆರೆಮೂಲೆಯ ಅರಣ್ಯದೊಳಗಿಂದ ಸ್ಥಳೀಯ ಸಿ.ಕೆ.ಗಣೇಶ್ ಎಂಬವರ ಕಾಫಿ ತೋಟಕ್ಕೆ ಆಗಮಿಸಿದ ಕಾಡಾನೆ ತೋಟದೊಳಗಿನ ಹಳ್ಳ ಕೊಳ್ಳಗಳಲ್ಲಿ ಸುತ್ತಾಡಿದರೂ ಕೂಡ ಕುಡಿಯುವ ನೀರು ಸಿಗದಿದ್ದಾಗ ಅಲ್ಲೇ ಸನಿಹದ ಅಶೋಕ್ ಎಂಬವರ ಮನೆಯಂಗಳಕ್ಕೆ ತೆರಳಿದೆ.
ಅಲ್ಲಿ ಅಶೋಕ್ ಎಂಬವರು ತಮ್ಮ ಮನೆಯ ಬಳಕೆಗೆ ನೀರು ಸಂಗ್ರಹಿಸಲು ತಂದಿಟ್ಟಿದ್ದ ಹತ್ತು ಸಾವಿರ ರೂ ಬೆಲೆಯ ನೀರು ಸಂಗ್ರಹ ಟ್ಯಾಂಕ್ ಬಳಿ ತೆರಳಿದ ಕಾಡಾನೆ, ಅದರೊಳಗೆ ನೀರಿಲ್ಲದ್ದನ್ನು ಕಂಡು ರೊಚ್ಚಿಗೆದ್ದು ನೀರಿನ ಟ್ಯಾಂಕನ್ನು ಒಡೆದು ತುಳಿದು ಹುಡಿ ಮಾಡಿದೆ. ಬಳಿಕ ಅಲ್ಲೇ ಅನತಿ ದೂರದಲ್ಲಿದ್ದ ಕೊಳವೆ ಬಾವಿಯ ಬಳಿ ತೆರಳಿದ ಸಲಗ ಅದರಲ್ಲಿಯೂ ನೀರು ಬರದಿದ್ದನ್ನು ಕಂಡು ಕೊಳವೆ ಬಾವಿಯ ಕಬ್ಬಿಣದ ಮೇಲು ಮುಚ್ಚಳವನ್ನು ಸೊಂಡಿಲಲ್ಲಿ ಕಿತ್ತು ಎಳೆದು ಬಿಟ್ಟ ಪರಿಣಾಮ ಕೊಳವೆ ಬಾವಿಗೆ ಅಳವಡಿಸಿದ ನೀರು ಮೇಲೆತ್ತುವ ಯಂತ್ರವನ್ನು ಬಾವಿಯೊಳಗೆ ಬೀಳಿಸಿ ಕಾಲ್ಕಿತ್ತಿದೆ.
ಬುಧವಾರ ಬೆಳಿಗ್ಗೆ ೬.೩೦ ರ ಸಮಯದಲ್ಲಿ ಕಾಡಾನೆ ಆಟಾಟೋಪ ನಡೆಸಿದ್ದನ್ನು ಖುದ್ದು ಕಂಡ ಅಶೋಕ್ ಅದೃಷ್ಟವಶಾತ್ ಕೂದಲೆಳೆಯ ಅಂತರದಿAದ ತಾವು ಪಾರಾದ ಬಗ್ಗೆ ಸ್ಥಳಕ್ಕೆ ತೆರಳಿದ ‘ಶಕ್ತಿ'ಗೆ ವಿವರಿಸಿದರು.
ಕಂದಕದಲ್ಲಿ ಸಿಲುಕಿದ ಕಾಡಾನೆ
ಕಾಫಿ ತೋಟಗಳು ಹಾಗೂ ಕಾಡಂಚಿನ ಮನೆಗಳ ಆವರಣದಲ್ಲಿ ದಾಹ ನೀಗಿಸಲು ನೀರು ಸಿಗದ ಕಾರಣ ಧೃತಿಗೆಟ್ಟು ಕಾಡಿಗೆ ಮರಳುತ್ತಿದ್ದ ಕಾಡಾನೆ ಅರಣ್ಯದಂಚಿನಲ್ಲಿದ್ದ ಕಂದಕದಲ್ಲಿ ನಿಂತಿದ್ದ ನೀರನ್ನು ಕುಡಿಯಲು ತೆರಳಿದಾಗ ಕಾಲುಗಳು ಹೂತು ಅಲ್ಲೇ ಕುಸಿದು ಬಿದ್ದಿದೆ.
ಬಳಿಕ ಬೆಳಿಗ್ಗೆ ೮ ಗಂಟೆ ಸಮಯದಲ್ಲಿ ಕಾಫಿ ಬೆಳೆಗಾರ ಸಿ.ಕೆ.ಗಣೇಶ್ ಮಾರ್ಗ ಮಧ್ಯೆ ತೆರಳುವಾಗ ಕಾಡಾನೆಯ ಬಳಲಿದ ಸದ್ದು ಕೇಳಿ ನೋಡಿ ಬೆಚ್ಚಿಬಿದ್ದು, ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಉಪವಲಯ ಅರಣ್ಯಾಧಿಕಾರಿಗಳಾದ ರಂಜನ್ ಹಾಗೂ ನಾಣಯ್ಯ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ತೆರಳಿ ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯನ್ನು ಮೇಲೆತ್ತಲು ಗಟ್ಟಿಯಾದ ಹಗ್ಗವೊಂದನ್ನು ತಂದು ಮರವೊಂದರ ಬುಡಕ್ಕೆ ಕಟ್ಟಿ ಅದರ ತುದಿಗೆ ಮರದ ಬೇರೊಂದನ್ನು ಕಟ್ಟಿ ಕಾಡಾನೆಯ ಸೊಂಡಿಲ ಬಳಿ ಬಿಟ್ಟಾಗ ಹಗ್ಗವನ್ನು ಹಿಡಿದು ಎಳೆಯುವ ಪ್ರಯತ್ನ ಮಾಡಿತಾದರೂ ಕೆಸರಲ್ಲಿ ಹೂತು ಹೋಗಿದ್ದ ಅದರ ಹಿಂಬದಿಯ ಕಾಲುಗಳನ್ನು ಮೇಲೆ ಎತ್ತಲಾರದಷ್ಟು ಬಸವಳಿದಿತ್ತು. ಕೊನೆಗೆ ಬಸವನಹಳ್ಳಿಯ ನವೀನ್ ಎಂಬವರ ಜೆಸಿಬಿ ಯಂತ್ರ ತರಿಸಿ ರಕ್ಷಣಾ ಕಾರ್ಯ ನಡೆಯಿತು ಬಳಿಕ ಕಾಡಾನೆಯನ್ನು ರಕ್ಷಿಸಲಾಯಿತು. ಕೆಸರಿನಿಂದ ಮೇಲೆದ್ದ ಕಾಡಾನೆ ಕಾಡಿಗೆ ತೆರಳುತ್ತಿದ್ದಾಗ ನಾಗ ಎಂಬವರ ಸ್ಕೂಟಿಗೆ ಹಾನಿಗೊಳಿಸಿ ತೆರಳಿದೆ.
-ಪ್ರತ್ಯಕ್ಷ ವರದಿ : ಕೆ.ಎಸ್.ಮೂರ್ತಿ/ ಕುಡೆಕಲ್ ಗಣೇಶ್