ಗೋಣಿಕೊಪ್ಪ, ಏ. ೧೦: ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ ವಿರಾಟ್ ಹೆಸರಿನ ಸಾಕಾನೆಯು ಅನಾರೋಗ್ಯದಿಂದ ತಾ.೯ ರಂದು ಮೃತಪಟ್ಟಿದೆ. ವೀರನಹೊಸಹಳ್ಳಿ ವನ್ಯಜೀವಿ ವ್ಯಾಪ್ತಿಯಲ್ಲಿದ್ದ ಈ ಆನೆಯನ್ನು ತಾ.೪ ರಂದು ಸೆರೆಹಿಡಿದು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ತರಲಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈ ಆನೆಯು ಚಿಕಿತ್ಸೆಗೆ ಸ್ಪಂದಿಸದೆ ತಾ.೯ ರಂದು ಮುಂಜಾನೆ ೨:೩೦ ಕ್ಕೆ ಮೃತಪಟ್ಟಿರುವುದಾಗಿ ಆನೆಚೌಕೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಸ್ಥಳಕ್ಕೆ ಹುಣಸೂರು ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ್ ಡಿ.ಎಸ್, ಹುಣಸೂರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯಾಧಿಕಾರಿ ರಮೇಶ್, ಆನೆಚೌಕೂರು ವನ್ಯಜೀವಿ ವಲಯದ ಅರಣ್ಯಾಧಿಕಾರಿ ದೇವರಾಜು ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ಶವ ಸಂಸ್ಕಾರ ನೆರವೇರಿಸಲಾಯಿತು.