ಸಿದ್ದಾಪುರ, ಏ. ೮: ಮನೆಯ ಸಮೀಪ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಘಟ್ಟದಳ್ಳ ಎಂಬಲ್ಲಿ ತೋಟದ ಲೈನ್ಮನೆಯಲ್ಲಿ ವಾಸ ಮಾಡಿಕೊಂಡಿರುವ ಸುಬ್ರಮಣಿ ಎಂಬವರಿಗೆ ಸೇರಿದ ಕಾರನ್ನು ಮನೆಯ ಸಮೀಪದಲ್ಲಿ ರಾತ್ರಿ ನಿಲ್ಲಿಸಲಾಗಿತ್ತು.
ಸೋಮವಾರ ಬೆಳಿಗ್ಗೆ ನೋಡಿದಾಗ ಕಾಡಾನೆಯು ಕಾರಿನ ಮೇಲೆ ದಾಳಿ ನಡೆಸಿರುವುದು ಕಂಡು ಬಂದಿದೆ. ಕಾಡಾನೆಯು ಕಾರಿಗೆ ದಂತದಿAದ ತಿವಿದಿದ್ದು, ಕಾರಿನ ಮುಂಭಾಗವೂ ಜಖಂಗೊAಡಿದೆ. ಈ ಬಗ್ಗೆ ಸುಬ್ರಮಣಿ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ತಿತಿಮತಿ ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಬಾಡಗ - ಬಾಣಂಗಾಲ ಗ್ರಾಮದ ಮಠ ಹಾಗೂ ಘಟ್ಟದಳ್ಳ ಭಾಗದಲ್ಲಿ ಸಲಗವೊಂದು ಆಗ್ಗಿಂದಾಗೆ ಸುತ್ತಾಡುತ್ತಿದೆ. ಅಲ್ಲದೇ ಮಾನವನ ಮೇಲೆ ಹಾಗೂ ವಾಹನಗಳ ಮೇಲೆ ದಾಳಿ ನಡೆಸಲು ಮುಂದಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಲಗವನ್ನು ಸೆರೆ ಹಿಡಿಯಲು ಇತ್ತೀಚೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಸೆರೆ ಹಿಡಿಯುವ ಕಾರ್ಯ ವಿಳಂಬ ವಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತ ರಾಗಿದ್ದಾರೆ. ಕೂಡಲೇ ಸಲಗವನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ವಾಸು