ಮಡಿಕೇರಿ, ಏ. ೩: ಕೊಡಗು ಜಿಲ್ಲೆಯಾದ್ಯಂತ ಕಾಫಿ ಕೊಯ್ಲು ಪೂರ್ಣಗೊಂಡು ಇದೀಗ ಕಾಳುಮೆಣಸು ಕೊಯ್ಲು ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಬೆಳೆಗಾರರು ಮತ್ತು ಕಾರ್ಮಿಕರು ಕಾಳುಮೆಣಸು ಕೊಯ್ಲು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕಾಳುಮೆಣಸು ಕೊಯ್ಲು ಮಾಡಲು ಕೊಡಗಿನಲ್ಲಿ ಕಳೆದ ಹತ್ತು ವರ್ಷಗಳಿಂದ ಅಲ್ಯೂಮಿನಿಯಂ ಏಣಿಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಕಾಳುಮೆಣಸು ಕೊಯ್ಲಿನ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ಸ್ಪರ್ಶಿಸಿ ೩೫ಕ್ಕೂ ಹೆಚ್ಚು ಬಡಪಾಯಿ ಕೂಲಿ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ.
ಆದರೂ ಕೂಡ ಜಿಲ್ಲೆಯಲ್ಲಿ ಕರಿಮೆಣಸು ಕೊಯ್ಲು ಮಾಡಲು ಅಲ್ಯೂಮಿನಿಯಂ ಏಣಿಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಕೊಡಗಿನ ಬಹುತೇಕ ತೋಟಗಳಲ್ಲಿ ವಿದ್ಯುತ್ ಪೂರೈಕೆ ಮಾಡುವ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಮರಗಳ ಪಕ್ಕದಲ್ಲೇ ವಿದ್ಯುತ್ ತಂತಿಗಳು ಕಾಣಸಿಗುತ್ತವೆ. ಕರಿಮೆಣಸು ಕೊಯ್ಲು ಮಾಡುವಾಗ ಎಷ್ಟೇ ಎಚ್ಚರ ವಹಿಸಿದರೂ ಕೂಡ ಆಕಸ್ಮಿಕವಾಗಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಗುಲಿ ಕಾರ್ಮಿಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕರಿಮೆಣಸು ಕೊಯ್ಲಿಗೆ ಮಾತ್ರವಲ್ಲದೆ ಮರ ಕಪಾತ್ ಸಂದರ್ಭದಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಅಲ್ಯೂಮಿನಿಯಂ ಏಣಿಯನ್ನು ತೋಟಗಳಲ್ಲಿ ಬಳಸುತ್ತಿದ್ದಾರೆ. ಅಲ್ಯೂಮಿನಿಯಂ ಏಣಿಯನ್ನು ಬಳಸಿ ಕೊಡಗು ಜಿಲ್ಲೆಯಲ್ಲಿ ಕರಿಮೆಣಸು ಕೊಯ್ಲು ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಅಲ್ಯೂಮಿನಿಯಂ ಏಣಿಗಳನ್ನು ಬಳಸುವಾಗ ಎಚ್ಚರ ವಹಿಸಬೇಕೆಂದು ಜಿಲ್ಲಾಡಳಿತ ಬೆಳೆಗಾರರಿಗೆ ಸೂಚನೆ ನೀಡಿದರೂ ಕೂಡ ಜಿಲ್ಲೆಯಲ್ಲಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಗುಲಿ ಪ್ರಾಣ ಕಳೆದುಕೊಳ್ಳವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ.
ಕಾಣೆಯಾದ ಬಿದಿರಿನ ಏಣಿಗಳು!
ಕಾಫಿ ತೋಟಗಳ ಮರಗಳಲ್ಲಿ ಹಬ್ಬಿಸಲಾಗಿರುವ ಕಾಳುಮೆಣಸು ಕೊಯ್ಲು ಮಾಡಲು ಏಣಿಗಳನ್ನು ಬಳಸುವುದು ಅನಿವಾರ್ಯ. ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕರಿಮೆಣಸು ಕೊಯ್ಲು ಮಾಡಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು.
ಕೊಡಗು ಜಿಲ್ಲೆಯಲ್ಲಿ ಅರಣ್ಯದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದ್ದ ಬಿದಿರಿಗೆ ಕಟ್ಟೆ ರೋಗ, ಕಾಡ್ಗಿಚ್ಚಿನಿಂದ ಬಿದಿರು ನಾಶಗೊಂಡು ಬಿದಿರು ಸಿಗದಂತಾಯಿತು. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ತೋಟಗಳಲ್ಲಿ ಮಾತ್ರ ಬಿದಿರಿನ ಏಣಿಗಳು ಕಾಣಸಿಗಬಹುದು.
ಹೊಸ ಆವಿಷ್ಕಾರ ಹಾಗೂ ಆಧುನಿಕತೆಯ ಪರಿಣಾಮ ಅಲ್ಯುಮಿನಿಯಮ್ ಹಾಗೂ ಕಬ್ಬಿಣದ ಏಣಿಗಳನ್ನು ಬಳಸಲಾಗುತ್ತಿವೆ. ಇದರ ಪರಿಣಾಮ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಏನೂ ಅರಿಯದ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹಗುರ ಎಂಬ ಕಾರಣಕ್ಕಾಗಿ ಅಲ್ಯೂಮಿನಿಯಂ ಏಣಿಗಳನ್ನು ಕರಿಮೆಣಸು ಕೊಯ್ಲು ಮಾಡಲು ಬಳಸುತ್ತಿದ್ದಾರೆ. ಅಲ್ಯೂಮಿನಿಯಂ ಭಾರ ಕಡಿಮೆಯಾಗಿರುವುದರಿಂದ ಏಣಿಗಳನ್ನು ಎತ್ತಿಕೊಂಡು ತೋಟದಲ್ಲಿ ಸುಲಭವಾಗಿ ನಡೆಯಬಹುದು ಎಂಬಿತ್ಯಾದಿ ಕಾರಣಗಳಿಂದ ಬೆಳೆಗಾರರು ಅಲ್ಯೂಮಿನಿಯಂ ಏಣಿಗಳನ್ನು ಬಳಸುತ್ತಿದ್ದಾರೆ. ಒಣಗಿರುವ ಬಿದಿರಿನ ಏಣಿಗಳು ಹೆಚ್ಚು ಭಾರವಿರುತ್ತದೆ.
ಚೆನ್ನಾಗಿ ಒಣಗಿದ ಬಿದಿರಿನಲ್ಲಿ ವಿದ್ಯುತ್ ಪ್ರವಹಿಸುವುದಿಲ್ಲ. ಫೈಬರ್ನ ವಿವಿಧ ಮಾದರಿಯ ಏಣಿಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಷ್ಟಾಗಿಯೂ ಅಲ್ಯೂಮಿನಿಯಂ ಏಣಿ ಬಳಸಬೇಕೆಂದರೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅತ್ಯುತ್ತಮ ವಿದ್ಯುತ್ ವಾಹಕವಾದ ಅಲ್ಯೂಮಿನಿಯಂ ಲೋಹದಿಂದ ಮಾಡಿದ ಏಣಿಯನ್ನು ವಿದ್ಯುತ್ ತಂತಿ ಹಾದು ಹೋದಲ್ಲಿ ಬಳಸಲೇಬಾರದು. ಕಾರ್ಮಿಕರು ಅಲ್ಯೂಮಿನಿಯಂ ಏಣಿ ಉಪಯೋಗಿಸುವ ಸಂದರ್ಭದಲ್ಲಿ ಸಂಬAಧಿಸಿದ ತೋಟಗಳ ಮಾಲೀಕರು ಜತೆಯಲ್ಲಿದ್ದು ಮಾರ್ಗದರ್ಶನ ಮಾಡುವುದು ಅನಿವಾರ್ಯವಾಗಿದೆ. ಕಾರ್ಮಿಕರ ಜೀವಕ್ಕೆ ಕುತ್ತು ತರುತ್ತಿರುವ ಅಲ್ಯೂಮಿನಿಯಂ ಏಣಿಗಳನ್ನು ಬಳಸುವಾಗ ಕಾರ್ಮಿಕರು ಎಚ್ಚರವಹಿಸಬೇಕಾಗಿದೆ. - ಕೆ.ಎಂ. ಇಸ್ಮಾಯಿಲ್ ಕಂಡಕರೆಅಧಿಕ ವೇತನ ಲಭ್ಯ
ಹೆಚ್ಚು ಸಂಬಳ ಕೊಡುತ್ತಾರೆ ಎಂದು ಹೇಳಿ ನಾವು ಕಾಳುಮೆಣಸು ಕೊಯ್ಲು ಕೆಲಸಕ್ಕೆ ಹೋಗುತ್ತೇವೆ. ತೋಟಗಳಲ್ಲಿ ವಿದ್ಯುತ್ ಲೈನ್ಗಳಿವೆ. ಅಲ್ಯೂಮಿನಿಯಂ ಏಣಿಯನ್ನು ಬಳಸುವಾಗ ಭಯ ಆಗುತ್ತದೆ. ಎಚ್ಚರಿಕೆಯಿಂದ ಕೊಯ್ಲು ಮಾಡುತ್ತಿದ್ದೇವೆ. ರಸ್ತೆ ಬದಿಗಳಲ್ಲಿ ಕರಿಮೆಣಸು ಕೊಯ್ಲು ಮಾಡುವಾಗ ಅತೀ ಎಚ್ಚರಿಕೆಯಿಂದ ಇರುತ್ತೇವೆ. ರಸ್ತೆ ಬದಿಗಳಲ್ಲಿ ವಿದ್ಯುತ್ ಲೈನ್ ಕಂಬಗಳು ಇರುತ್ತವೆ. ಹಿಂದೆ ಬಿದಿರಿನ ಏಣಿಗಳನ್ನು ಬಳಸಿ ನಾವು ಕಾಳುಮೆಣಸು ಕೊಯ್ಲು ಮಾಡುತ್ತಿದ್ದೆವು. ಆದರೆ ಕಳೆದ ಹತ್ತು ವರ್ಷಗಳಿಂದ ತೋಟಗಳಲ್ಲಿ ಬಿದಿರಿನ ಏಣಿಗಳೇ ಇಲ್ಲದಂತಾಗಿದೆ.
- ಕಾಳುಮೆಣಸು ಕೊಯ್ಲು ಮಾಡುವ ಕಾರ್ಮಿಕ, ಚೆಟ್ಟಳ್ಳಿ.