ಸೋಮವಾರಪೇಟೆ, ಏ. ೩: ಸಮೀಪದ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ಸನ್ನಿದಿಯಲ್ಲಿ ಪರಿವಾರ ದೈವಗಳ ನೇಮೋತ್ಸವ ನಡೆಯಿತು.
ಶ್ರೀ ರಕ್ತೇಶ್ವರಿ, ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಮಂತ್ರ ಗುಳಿಗ ದೈವಗಳ ಕೋಲದಲ್ಲಿ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು. ಗಣಹೋಮ, ದೈವಗಳ ಶುದ್ಧೀಕರಣ, ಅನ್ನದಾನ ನಡೆಯಿತು.
ಅನೇಕರು ಹರಕೆ ತೀರಿಸಿದರು. ಕೆಲವರು ಇಷ್ಟಾರ್ಥ ಸಿದ್ಧಿಗಾಗಿ ದೈವಗಳಲ್ಲಿ ಹರಕೆ ಹೊತ್ತರು. ಮಂಗಳೂರು ಮೂಲದ ದೈವಗಳ ನೃತ್ಯವನ್ನು ಭಕ್ತಾದಿಗಳು ಭಕ್ತಿಪರವಶರಾಗಿ ವೀಕ್ಷಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ ಮಾತನಾಡಿ, ದಿ. ವೆಂಕಟರಮಣಾಚಾರ್ಯ ಅವರ ಶ್ರಮದಿಂದ ಗೌಡಳ್ಳಿಯಲ್ಲಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ನಿರ್ಮಿಸಿ, ಸರ್ವ ಧರ್ಮಕ್ಷೇತ್ರವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ. ಈ ಕ್ಷೇತ್ರದ ಶಕ್ತಿ ಇಲ್ಲಿನ ಭಕ್ತಾದಿಗಳಿಗೆ ತಿಳಿದಿದೆ. ದಕ್ಷಿಣ ಕನ್ನಡ ಯಕ್ಷಗಾನ ಕಲೆಯ ಪ್ರದರ್ಶನ ಪ್ರತಿವರ್ಷ ಗೌಡಳ್ಳಿ ಕ್ಷೇತ್ರದಲ್ಲಿ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪರಿವಾರ ದೈವಗಳ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ನಡೆಯುತ್ತಿದೆ. ಇದರಿಂದ ಕ್ಷೇತ್ರದ ಶಕ್ತಿ ಹೆಚ್ಚಾಗಿದೆ ಎಂದು ಹೇಳಿದರು.
ಪ್ರಧಾನ ಅರ್ಚಕ ವಿಶ್ವ ರೂಪಾಚಾರ್ಯ, ಪದಾಧಿಕಾರಿ ಗಳಾದ ಮಹೇಶ್, ಚಂದ್ರಶೇಖರ್, ಗುರುಪ್ರಸಾದ್ ಮತ್ತಿತರರು ಇದ್ದರು.