ಮಡಿಕೇರಿ, ಮಾ. ೨೮: ಕೊಡಗು ವಿಶ್ವವಿದ್ಯಾನಿಲಯದಲ್ಲಿ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ್ ತಿಳಿಸಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಗುರುವಾರ ನಡೆದ ಕೊಡಗು ವಿಶ್ವವಿದ್ಯಾನಿಲಯದ ಪ್ರಥಮ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯದಲ್ಲಿ ಹಲವು ಇತಿಮಿತಿಗಳ ನಡುವೆ ಧನಾತ್ಮಕ ಚಿಂತನೆ ಒಳಗೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಯುವಜನರಿಗೆ ಉದ್ಯೋಗ ಸೃಷ್ಟಿಯತ್ತ ವಿಶೇಷ ಆದ್ಯತೆ ನೀಡಲಾಗಿದೆ. ಕೊಡಗು ವಿಶ್ವ ವಿದ್ಯಾನಿಲಯದಲ್ಲಿ ಬಿಸಿಎ, ಎಂಸಿಎ, ಎಂಬಿಎ, ಪದವಿ, ಸ್ನಾತಕೋತ್ತರ ಪದವಿ ಆರಂಭಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಕೆ. ರವಿ ಮಾತನಾಡಿ, ಕೊಡಗು ವಿಶ್ವ ವಿದ್ಯಾನಿಲಯವು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಆ ನಿಟ್ಟಿನಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆಧುನಿಕ ಬದುಕಿನಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬದಲಾವಣೆಗಳತ್ತ ವಿಶ್ವವಿದ್ಯಾನಿಲಯಗಳು ಸಾಗಬೇಕು ಎಂದರು.

ಹಾಸನ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ತರಿಕೆರೆ ಚಂದ್ರಶೇಖರ ತಾರಾನಾಥ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ವಾತಾವರಣ ದಲ್ಲಿ ಬದಲಾವಣೆ ಕಂಡು ಬರುತ್ತಿದ್ದು, ಪ್ರಾಕೃತಿಕ ಪರಿಸರ ಹಾಗೂ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು ಜಲಸಂರಕ್ಷಣೆ, ವಾತಾವರಣದಲ್ಲಿನ ಬದಲಾವಣೆ ಮತ್ತಿತರ ವಿಷಯಗಳ ಕುರಿತು ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುವಂತಾಗಬೇಕು ಎಂದರು.

ಹಾವೇರಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸುರೇಶ್ ಎಚ್.ಜಂಗಮಶೆಟ್ಟಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸಹ ಸಾಮಾಜಿಕ ಕಳಕಳಿ ಇರಬೇಕು. ಸಾಮಾಜಿಕ ಕಳಕಳಿ ಇದ್ದಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು. ಆಧುನಿಕ ಬದುಕಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಗಣಕಯಂತ್ರ ಇದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿವರ್ತನೆಗೆ ಮುಂದಾಗಬೇಕು ಎಂದರು.

ಕೊಡಗು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಸೀನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಒಂದು ಘಟಕ ಕಾಲೇಜು, ೬ ಸರ್ಕಾರಿ ಪದವಿ ಕಾಲೇಜುಗಳು, ೩ ಅನುದಾನಿತ ಕಾಲೇಜುಗಳು, ೧೨ ಖಾಸಗಿ ಕಾಲೇಜುಗಳು, ಒಟ್ಟು ೨೩ ಕಾಲೇಜುಗಳನ್ನು ಕೊಡಗು ವಿಶ್ವವಿದ್ಯಾನಿಲಯ ಒಳಗೊಂಡಿದೆ ಎಂದು ತಿಳಿಸಿದರು.

ಬರೋಡ ಬ್ಯಾಂಕಿನ ಮಂಗಳೂರು ವಲಯ ಮುಖ್ಯಸ್ಥರಾದ ಗಾಯತ್ರಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಘವ, ಕೊಡಗು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಕೆ.ಎನ್.ಜನಾರ್ಧನ್ ಅವರು ಮಾತನಾಡಿದರು.

ಪ್ರಾಧ್ಯಾಪಕರಾದ ಜಮೀರ್ ಅಹ್ಮದ್ ವಿವಿಧ ವಿಶ್ವವಿದ್ಯಾನಿಲಯದ ಕುಲಪತಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರಾದ ಜಯಶಂಕರ್ ಮಾತನಾಡಿದರು. ಪ್ರಾಧ್ಯಾಪಕರಾದ ಶ್ರೀಧರ ಹೆಗಡೆ ನಿರೂಪಿಸಿದರು. ರಾಘವ ವಂದಿಸಿದರು.