ಕುಶಾಲನಗರ, ಮಾ.೨೮: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕುಶಾಲನಗರ ಪುರಸಭೆಗೆ ವಿಲೀನಗೊಂಡ ಸಂಬAಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ದಾವೆ ತಿರಸ್ಕೃತಗೊಂಡಿದೆ.

ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನವೇ ಗ್ರಾಮ ಪಂಚಾಯಿತಿ ಸದಸ್ಯರುಗಳ ಅಧಿಕಾರವನ್ನು ಮೊಟಕುಗೊಳಿಸಿ ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಕಂದಾಯ ಗ್ರಾಮ ವ್ಯಾಪ್ತಿಯನ್ನು ಸೇರ್ಪಡೆಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಮತ್ತು ಬಹುತೇಕ ಸದಸ್ಯರು ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ನಡುವೆ ಇಬ್ಬರು ಸದಸ್ಯರು ತಮ್ಮ ಪಂಚಾಯಿತಿ ವ್ಯಾಪ್ತಿ ಕುಶಾಲನಗರ ಪುರಸಭೆಗೆ ಒಳಪಡುವುದರ ಬಗ್ಗೆ ಒಪ್ಪಿಗೆ ಸೂಚಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಹೈಕೋರ್ಟ್ನಲ್ಲಿ ವ್ಯಾಜ್ಯ ನಡೆದು ಇದೀಗ ಸರಕಾರದ ಆದೇಶವನ್ನು ಎತ್ತಿ ಹಿಡಿದು ಆದೇಶ ಹೊರಡಿಸಿದೆ.

ಇದೀಗ ಲೋಕಸಭಾ ಚುನಾವಣೆಯ ಬೆನ್ನಲ್ಲೇ ಕುಶಾಲನಗರ ಪುರಸಭೆಯ ನೂತನ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಅಧಿಕವಾಗಿದೆ. -ಸಿಂಚು