ಮಡಿಕೇರಿ, ಮಾ. ೨೦: ಕಳೆದ ಮೂರ್ನಾಲ್ಕು ದಿನಗಳಿಂದ ಇಡೀ ರಾಜ್ಯದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿತ್ತು. ಅಂತೂ ಇಂತೂ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಕ್ ನೀಡಿ ಬಿಜೆಪಿ ಹೈಕಮಾಂಡ್, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮಣೆ ಹಾಕಿದೆ. ಇದೀಗ ಕಳೆದ ಎರಡು ದಶಕಗಳ ಬಳಿಕ ಒಡೆಯರ್ ಕುಟುಂಬ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ. ೨೦೦೪ರ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಶ್ರೀ ಕಂಠದತ್ತ ಚಾಮರಾಜ ಒಡೆಯರ್ ಅವರು ಮತ್ತೆ ರಾಜಕೀಯ ಪ್ರವೇಶ ಮಾಡಿರಲಿಲ್ಲ.

೨೦೦೮ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಸ್ಪರ್ಧೆ ಮಾಡಬಹುದೆಂದು ಅಂದಾಜಿಸಲಾಗಿದ್ದರು ಕೂಡ ಶ್ರೀಕಂಠದತ್ತ ಒಡೆಯರ್ ಅವರು ದೂರ ಉಳಿದಿದ್ದರು. ಇದೀಗ ಶ್ರೀಕಂಠದತ್ತ ಒಡೆಯರ್ ಅವರ ದತ್ತು ಪುತ್ರ ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವುದರ ಮೂಲಕ ರಾಜವಂಶಸ್ಥರಿಗೆ ಮಣೆ ಹಾಕಲಾಗಿದೆ.

ಮೈಸೂರಿನ ರಾಜಕೀಯ ಇತಿಹಾಸವನ್ನು ಒಮ್ಮೆ ನೋಡುವುದಾದರೆ ರಾಜವಂಶಸ್ಥರಿಗೆ ರಾಜಕೀಯ ಹೊಸತೇನಲ್ಲ. ಆದರೆ ಎರಡು ದಶಕಗಳ ರಾಜಕೀಯ ಸುದೀರ್ಘವಾದ ವಿರಾಮದಿಂದ ಮತ್ತೆ ರಾಜಕೀಯ ಅಖಾಡಕ್ಕೆ ಧುಮುಕಿರುವ ಮೈಸೂರು ರಾಜವಂಶಸ್ಥರ ಕುಡಿ ಯದುವೀರ್ ಒಡೆಯರ್ ಯಶಸ್ಸು ಸಾಧಿಸುತ್ತಾ? ಎಂದು ಕಾದುನೋಡಬೇಕಾಗಿದೆ.

ತಂದೆ ಮಹಾರಾಜರ ಯಶಸ್ಸು ಸಿಗುತ್ತಾ ಯುವರಾಜನಿಗೆ!

ಎರಡು ದಶಕಗಳ ಹಿಂದಿನ ರಾಜಕೀಯ ವ್ಯವಸ್ಥೆಗೂ, ಇಂದಿನ ರಾಜಕೀಯ ವ್ಯವಸ್ಥೆಗೂ ಹೋಲಿಕೆ ಮಾಡಿ ನೋಡುವಾಗ ಮೈಸೂರಿನಲ್ಲಿ ರಾಜಕೀಯ ಬೆಳೆವಣಿಗೆಗಳಲ್ಲಿ ಹಲವು ಬದಲಾವಣೆ ಕಂಡಿದೆ. ಮುಖ್ಯವಾಗಿ ಮೈಸೂರು ಭಾಗದಲ್ಲಿ ಜಾತಿ ರಾಜಕೀಯ ಯಥೇಚ್ಛವಾಗಿ ನಡೆಯುತ್ತಿದೆ. ಒಬಿಸಿ ಕೋಟಾ, ರಾಜಮನೆತನವು ಮೈಸೂರಿಗೆ ನೀಡಿದ ಕೊಡುಗೆ, ಮೈಸೂರಿನ ಅಭಿವೃದ್ಧಿ ಈಗೆ ನಾನಾ ಲೆಕ್ಕಾಚಾರದ ಮೂಲಕ ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಆದರೆ ತಂದೆ ಶ್ರೀಕಂಠದತ್ತ ಚಾಮರಾಜ ಒಡೆಯರ್ ಅವರ ಯಶಸ್ಸು ಯುವರಾಜ ಯದುವೀರ್ ಒಡೆಯರ್‌ಗೆ ಸಿಗುತ್ತಾ ಎಂಬುದು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳು.

೧೯೮೪ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಜನತಾ ಪಕ್ಷದ ಕೆಪಿ ಶಾಂತಮೂರ್ತಿ ಎದುರು ೨,೪೭,೭೫೪ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ೧೯೮೯ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ಎರಡನೇ ಬಾರಿ ಸ್ಪರ್ಧಿಸಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಜನತಾ ಪಕ್ಷದ ಡಿ. ಮಾದೇಗೌಡ ವಿರುದ್ಧ ೩,೮೪,೮೮೮ ಮತಗಳನ್ನು ಪಡೆದು ಎರಡನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಆದರೆ ೧೯೯೧ ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ದೇವರಾಜ್ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ವಿರುದ್ಧ ಸೋಲು ಕಂಡಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಚಂದ್ರಪ್ರಭಾ ಅರಸು ೨,೨೫೮೮೧ ಮತ್ತು ಶ್ರೀಕಂಠದತ್ತ ಒಡೆಯರ್ ಅವರು ೨,೦೮,೯೯೯ ಮತಗಳನ್ನು ಪಡೆದು ಸೋಲು ಕಂಡಿದ್ದರು. ಸಂಸದ ಶ್ರೀಕಂಠದತ್ತ ಒಡೆಯರ್ ಅವರು ಜನರ ಕೈಗೆ ಸಿಗುವುದಿಲ್ಲ ಎಂಬ ಆರೋಪಗಳು ಕೇಳಿ ಬಂದ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ೧೯೯೬ರ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೀಕಂಠದತ್ತ ಒಡೆಯರ್ ಅವರು ೨,೫೮೨೯೯ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಆದರೆ ೧೯೯೮ರಲ್ಲಿ ಕಾಲು ನೋವಿನ ಸಮಸ್ಯೆಯಿಂದ ಒಡೆಯರ್ ಅವರು ಸ್ಪರ್ಧಿಸಿಲ್ಲ. ೧೯೯೯ರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಸಿ ವಿಜಯ್ ಶಂಕರ್ ಅವರು ನೀಡಿದ ಪ್ರಬಲ ಪೈಪೋಟಿಯಿಂದ ೩,೩೮,೦೫೧ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ೨೦೦೪ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಕಂಠದತ್ತ ಒಡೆಯರ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ತೀವ್ರ ಸೋಲು ಕಂಡಿದ್ದರು. ೨೦೦೪ರ ಲೋಕಸಭಾ ಚುನಾವಣೆಯಲ್ಲಿ ೩,೧೬,೬೬೧ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಜೆಡಿಎಸ್ ಪಕ್ಷದ ಗುರುಸ್ವಾಮಿ ಅವರು ೩,೦೬,೨೯೨ ಮತಗಳನ್ನು ಪಡೆದು ವಿಜಯ್ ಶಂಕರ್ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಒಡೆಯರ್ ಅವರು ೨,೯೯,೨೭೭ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಮೈಸೂರು ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಮೊದಲು ಎಚ್.ಡಿ ಕೋಟೆ, ಕೆ.ಆರ್ ನಗರ ವಿಧಾನಸಭಾ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡು ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರವು ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ, ಕೆ.ಆರ್ ನಗರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿತ್ತು. ಕ್ಷೇತ್ರ ಪುನರ್ವಿಂಗಡಣೆ ಬಳಿಕ ಇಡೀ ಲೋಕಸಭಾ ಚುನಾವಣೆಯ ಚಿತ್ರಣ ಬದಲಾಗಿದೆ. ನಂತರ ನಡೆದ ಮೂರು ಚುನಾವಣೆಯಲ್ಲಿ ಒಂದು ಬಾರಿ ಕಾಂಗ್ರೆಸ್ ಮತ್ತು ಎರಡು ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು. ಇದೀಗ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಮೈಸೂರು-ಲೋಕಸಭಾ ಕ್ಷೇತ್ರವು ನಾಲ್ಕನೇ ಚುನಾವಣೆಯನ್ನು ಎದುರಿಸುತ್ತಿವೆ. ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಒಟ್ಟು ಆರು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ನಾಲ್ಕು ಗೆಲುವು ಸಾಧಿಸಿದರೆ, ಎರಡು ಬಾರಿ ಸೋಲು ಕಂಡಿದ್ದರು. ಒಂದು ಬಾರಿ ಬಿಜೆಪಿಯಿಂದ ಮತ್ತು ಒಂದು ಕಾಂಗ್ರೆಸ್‌ನಿAದ ಸೋಲು ಕಂಡಿದ್ದರು. ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದ್ದರು. ಇದೀಗ ಎರಡು ದಶಕಗಳ ಬಳಿಕ ಮೈಸೂರು ರಾಜವಂಶಸ್ಥ ಕುಡಿ ಯದುವೀರ್ ಒಡೆಯರ್ ಅವರು ರಾಜಕೀಯ ಅಖಾಡಕ್ಕೆ ಬಿಜೆಪಿ ಮುಖಾಂತರ ಪ್ರವೇಶಿಸಿದ್ದಾರೆ. ತಂದೆ ಶ್ರೀಕಂಠದತ್ತ ನರಸಿಂಹರಾಜ ಚಾಮರಾಜ ಒಡೆಯರ್ ಅವರು ಯಶಸ್ಸು ಯುವರಾಜ ಯದುವೀರ್ ಒಡೆಯರ್‌ಗೆ ಸಿಗುತ್ತಾ ಎಂದು ಕಾದುನೋಡಬೇಕಾಗಿದೆ.

ಮತ್ತೆ ರಾಜಕೀಯಕ್ಕೆ ರಾಜವಂಶಸ್ಥರು

ಮೈಸೂರಿನ ರಾಜವಂಶಸ್ಥರು ಇತ್ತೀಚಿನ ರಾಜಕೀಯದಿಂದ ದೂರವೇ ಉಳಿದಿದ್ದರು. ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ.ದೇವರಾಜ ಅರಸು ನಂತರ ಅರಸು ಸಮುದಾಯದ ಯಾರು ಕೂಡ ರಾಜಕೀಯದಲ್ಲಿ ದೊಡ್ಡ ಸ್ಥಾನವನ್ನು ಪಡೆದಿಲ್ಲ. ಶ್ರೀ ಕಂಠದತ್ತ ಒಡೆಯರ್ ೧೯೮೪, ೧೯೮೯, ೧೯೯೩ ಮತ್ತು ೧೯೯೯ ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಬಳಿಕ ಒಡೆಯರ್ ಚುನಾವಣೆಗೆ ನಿಲ್ಲಲಿಲ್ಲ. ದೇವರಾಜು ಅರಸರ ಬಳಿಕ ರಾಜ್ಯ ರಾಜಕೀಯದಲ್ಲಿ ಹೆಚ್ಚು ಹೆಸರು ಮಾಡಿದ್ದು ಇವರ ಪುತ್ರಿ ಚಂದ್ರಪ್ರಭಾ ಅರಸು. ಹುಣಸೂರಿನ ಶಾಸಕಿಯಾಗಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ೧೯೯೧ ರಲ್ಲಿ ಶ್ರೀ ಕಂಠದತ್ತ ಒಡೆಯರ್ ವಿರುದ್ಧ ಕಾಂಗ್ರೆಸ್‌ನಿAದ ಸ್ಪರ್ಧಿಸಿ ಸಂಸದರಾಗಿದ್ದರು. ದೇವರಾಜ ಅರಸರ ಮತ್ತೊಬ್ಬ ಪುತ್ರಿ ಭಾರತೀ ಅರಸು ಹುಣಸೂರಿನಲ್ಲಿ ಸ್ಪರ್ಧಿಸಿ ಸೋತಿದ್ದರು. ಚಂದ್ರಪ್ರಭಾ ಅರಸು ಅವರ ಪುತ್ರ ಮಂಜುನಾಥ ಅರಸು ಹುಣಸೂರಿನಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅರಸರ ಮೊಮ್ಮಗ ಸೂರಜ್ ಹೆಗಡೆ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ದೇವರಾಜ ಅರಸು, ಜಯದೇವರಾಜ ಅರಸು, ಶ್ರೀಕಂಠದತ್ತ ನರಸಿಂಹರಾಜ, ಚಂದ್ರಪ್ರಭಾ ಅರಸು ಬಳಿಕ ಮೈಸೂರಿನಿಂದ ಅರಸು ಜನಾಂಗದ ದೊಡ್ಡ ನಾಯಕರು ಚುನಾವಣಾ ಅಖಾಡಕ್ಕೆ ಇಳಿದಿಲ್ಲ. ಇದೀಗ ಎರಡು ದಶಕಗಳ ಬಳಿಕ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಅರಸು ವರ್ಗದ ಯದುವೀರ್ ಒಡೆಯರ್ ಅವರಿಗೆ ಲಭಿಸಿದ್ದು, ಅರಸು ವರ್ಗದ ರಾಜಕೀಯಕ್ಕೆ ಯದುವೀರ್ ಒಡೆಯರ್ ಮರುಜೀವ ತುಂಬುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಘಟಾನುಘಟಿಗಳ ಮೂಲಕ ಪ್ರಯತ್ನ

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಒಡೆಯರ್ ಅವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಪ್ರಯತ್ನ ನಡೆಸಿದ್ದರು. ಆದರೆ ಯದುವೀರ್ ಅವರು ಆಸಕ್ತಿ ತೋರಲಿಲ್ಲ. ನಂತರ ತಾಯಿ ಪ್ರಮೋದಾದೇವಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಸುದ್ದಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಇದೀಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಯದುವೀರ್ ಒಡೆಯರ್ ಅವರಿಗೆ ಬಿಜೆಪಿಯಿಂದ ನೀಡಲಾಗಿದ್ದು, ಇದರ ಹಿಂದೆ ಯದುವೀರ್ ಅವರ ಮಾವ ರಾಜಸ್ಥಾನದ ಹರ್ಷವರ್ಧನ್ ಸಿಂಗ್ ದುಂಗಾರಪುರದ ಮೂಲಕ ಬಿಜೆಪಿ ಲಾಬಿ ನಡೆಸಿ ಯಶಸ್ಸು ಕಂಡಿದ್ದಾರೆ. ಯದುವೀರ್ ಒಡೆಯರ್ ಅವರ ಪತ್ನಿ ತ್ರಿಷಿಕಾ ತಂದೆ ಹರ್ಷವರ್ಧನ್ ಸಿಂಗ್ ಬಿಜೆಪಿಯ ರಾಜ್ಯಸಭೆಯ ಮಾಜಿ ಸದಸ್ಯರಾಗಿದ್ದಾರೆ. ಹರ್ಷವರ್ಧನ್ ಮೂಲಕ ಯದುವೀರ್ ಮನವೊಲಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.

ಎರಡು ದಶಕಗಳ ಬಳಿಕ ಮೈಸೂರು ರಾಜವಂಶಸ್ಥರನ್ನು ಯದುವೀರ್ ಒಡೆಯರ್ ಮೂಲಕ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಮಾಡಿಸಿರುವ ಬಿಜೆಪಿ ಯಶಸ್ಸು ಕಾಣುತ್ತಾ ಎಂಬುದನ್ನು ಕಾದು ನೋಡಬೇಕಷ್ಟೆ.

(ಕೆ.ಎಂ ಇಸ್ಮಾಯಿಲ್ ಕಂಡಕರೆ)