ಎಸ್.ಎA. ಮುಬಾರಕ್
ಸಿದ್ದಾಪುರ, ಮಾ. ೧೯: ಕಾಡಿನಿಂದ ಕಾಫಿ ತೋಟಕ್ಕೆ ಬಂದು ಕೃಷಿ ಪಸಲುಗಳನ್ನು ತುಳಿದು ತಿಂದು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ ಮಾಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿದ್ದು, ಕಾಡಾನೆಗಳ ಪತ್ತೆಗಾಗಿ ಸಾಕಾನೆಗಳು ಹುಡುಕಾಟ ಆರಂಭಿಸಿವೆ.
ವೀರಾಜಪೇಟೆ ತಾಲೂಕಿನ ಚೆನ್ನಂಗಿ ಅಬ್ಬೂರು ಭಾಗದ ಕಾಫಿ ತೋಟಗಳಲ್ಲಿ ಮತ್ತಿಗೋಡು ಶಿಬಿರದ ಶ್ರೀಕಂಠ, ಅಶೋಕ್ ಎಂಬ ಎರಡು ಸಾಕಾನೆಗಳೊಂದಿಗೆ ಆರ್ಆರ್ಟಿ ತಂಡದ ೧೦ಕ್ಕೂ ಹೆಚ್ಚು ಸಿಬ್ಬಂದಿಗಳ ತಂಡ ಕೂಂಬಿAಗ್ ನಡೆಸುತ್ತಿದೆ.
ಉಪಟಳ ನೀಡುವ ಮೂರು ಆನೆಗಳನ್ನು ಸೆರೆಹಿಡಿದು ಎರಡು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಬೇರೆ ಕಡೆ ಬಿಡಲಾಗುವುದು ಹಾಗೂ ಮನುಷ್ಯರ ಮೇಲೆ ದಾಳಿ ಮಾಡುವ ಆನೆಯೊಂದನ್ನು ಸೆರೆಹಿಡಿದು ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಆನೆಗಳ ಗುರುತು ಪತ್ತೆ ಹಚ್ಚಲು ಸಾಕಾನೆಗಳೊಂದಿಗೆ ಸಿಬ್ಬಂದಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಇತರ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯೂ ಮುಂದುವರಿದಿದೆ. ಕಾಫಿ ತೋಟಗಳಲ್ಲಿ ಕಾಳು ಮೆಣಸು ಹಾಗೂ ಕಾಫಿ ಕೊಯ್ಲು ಕೆಲಸ ನಡೆಯುತ್ತಿದ್ದು. ಮುನ್ನೆಚ್ಚರಿಕೆ ಕ್ರಮವಾಗಿ ಬೆಳೆಗಾರರು, ಕಾರ್ಮಿಕರು ಎಚ್ಚರ ವಹಿಸಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ಈಗಾಗಲೇ ಹಾಸನ ಜಿಲ್ಲೆಯಲ್ಲಿ ಕಾಡಾನೆ ಸೆರೆ ಹಿನ್ನೆಲೆ ಜಿಲ್ಲೆಯ ಶಿಬಿರಗಳಿಂದ ಕಾಡಾನೆಗಳು ತೆರಳಿದ್ದು ಜಿಲ್ಲೆಗೆ ಬಂದ ನಂತರ ಅವುಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವುದಾಗಿ ವೀರಾಜಪೇಟೆ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟು ಕೃಷಿ ಫಸಲು ನಾಶ ಮಾಡುವುದರ ಮೂಲಕ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿ ಮರಿಯಾನೆಗಳೊಂದಿಗೆ ಗುಂಪುಗಳಾಗಿ ಕಾಣಿಸಿಕೊಳ್ಳುತ್ತವೆ. ಕಳೆದ ೭ ತಿಂಗಳಲ್ಲಿ ಕಾಡಾನೆ ದಾಳಿಗೆ ತಾಲೂಕಿನಲ್ಲಿ ೬ ಮಂದಿ ಮೃತಪಟ್ಟಿದ್ದಾರೆ.
ಸಂಕಷ್ಟದ ನಡುವೆ ಕೂಲಿ ಕೆಲಸ ಮಾಡಿ ಜೀವನ ನಡೆಸುವ ಕಾರ್ಮಿಕ ಕುಟುಂಬಗಳು ಕಾಡು ಪ್ರಾಣಿಗಳ ಭಯದ ನಡುವೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಾರರು ವರ್ಷವಿಡಿ ಕಷ್ಟಪಟ್ಟು ಬೆಳೆದ ಕೃಷಿ ಫಸಲುಗಳು ಪ್ರಾಣಿಗಳ ಪಾಲಾಗುತ್ತಿವೆ.
ಹಲವು ವರ್ಷಗಳಿಂದಲೂ ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯದಂಚಿನಲ್ಲಿ ಆನೆ ಕಂದಕ, ಸೋಲಾರ್ ಬೇಲಿ, ಸ್ಟೆöÊಕ್ ಗೇಟ್, ಕಾಂಕ್ರೀಟ್ ಫಿಲ್ಲರ್, ಮುಳ್ಳು ತಂತಿ ಕಂಬಗಳನ್ನು ಅಳವಡಿಸಲಾಗಿತ್ತು
ಕಾಡಾನೆಗಳು ಇವೆಲ್ಲವನ್ನೂ ದಾಟಿ ಕಾಫಿ ತೋಟ ಹಾಗೂ ಗ್ರಾಮಗಳತ್ತ ಮುಖ ಮಾಡಿವೆ. ಇದೀಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೈಲ್ವೆ ಕಂಬಿಗಳನ್ನು ಅಳವಡಿಸಲಾಗುತ್ತಿದ್ದು ಕಾಡಾನೆಗಳು ಕಂಬಿಯನ್ನ ದಾಟಿ ಹೊರಬರುವ ಘಟನೆಗಳು ನಡೆದಿವೆ.
ಈ ಹಿಂದೆ ಅಮ್ಮತ್ತಿ ಬಳಿ ಸೆರೆ ಹಿಡಿಯಲಾಗಿದ್ದ ಕಾಡಾನೆಯನ್ನ ಬಂಡಿಪುರ ಅರಣ್ಯದಲ್ಲಿ ಬಿಡಲಾಗಿದ್ದರು ಮತ್ತೆ ವಾಪಸ್ ಬಂದ ಘಟನೆಗಳು ನಡೆದಿವೆ. ಆನೆ ಮಾನವ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಅರಣ್ಯದಲ್ಲಿ ಪ್ರಾಣಿಗಳಿಗೆ ಬೇಕಾದ ಆಹಾರ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಕಾಡುಪ್ರಾಣಿಗಳು ನಾಡಿನತ್ತ ಬಾರದ ಹಾಗೆ ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಗಳನ್ನು ರೂಪಿಸಬೇಕಾಗಿದೆ ಕೋಟ್ಯಂತರ ವೆಚ್ಚ ಮಾಡಿ ರೈಲ್ವೆ ಕಂಬಿಗಳನ್ನ ಅಳವಡಿಸಲಾಗುತ್ತಿದ್ದರು ಪ್ರಯೋಜನಕ್ಕೆ ಬಾರದಂತಾಗಿದೆ.