ಚೆಯ್ಯಂಡಾಣೆ, ಮಾ. ೧೯: ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್.ಎಸ್. ಎಫ್) ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲೆಯಲ್ಲಿರುವ ಪ್ರತಿಯೊಂದು ಶಾಖೆಗಳಿಗೆ ಭೇಟಿ ನೀಡುವ ವೊಯೇಜ್ ವಿನೂತನ ಕಾರ್ಯಕ್ರಮಕ್ಕೆ ಚೆನ್ನಯ್ಯನ ಕೋಟೆ ಮಖಾಂನಲ್ಲಿ ಚಾಲನೆ ನೀಡಲಾಯಿತು.

ಮಾದಕ ವಸ್ತುಗಳು ಮುಂತಾದ ದುಶ್ಚಟಗಳಿಗೆ ಬಲಿಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ಸರಿದಾರಿಗೆ ತರುವ ಹಾಗೂ ಸಮುದಾಯ, ಸಮಾಜಕ್ಕೂ ಉಪಕಾರವಾಗುವ ಪ್ರಜೆಗಳನ್ನಾಗಿ ರೂಪುಗೊಳಿಸುವ ಉದ್ದೇಶದೊಂದಿಗೆ ಕಳೆದ ಐವತ್ತು ವರ್ಷಗಳಿಂದ ರಾಜ್ಯಾದ್ಯಂತ ಸುನ್ನಿ ವಿದ್ಯಾರ್ಥಿ ಸಂಘಟನೆ ಎಸ್.ಎಸ್.ಎಫ್ ಕಾರ್ಯನಿರ್ವಹಿಸುತ್ತಿದೆ.

ಕೊಡಗು ಜಿಲ್ಲೆಯಲ್ಲಿರುವ ೮೫ಕ್ಕಿಂತಲೂ ಅಧಿಕ ಶಾಖೆಗಳಿಗೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಲಿದ್ದಾರೆ.

ಶಾಖೆಗಳ ಕಾರ್ಯಾಚರಣೆ ಗಳನ್ನು ಮತ್ತಷ್ಟು ಬಲಪಡಿಸುವ ಮಹತ್ತರವಾದ ಧ್ಯೇಯದೊಂದಿಗೆ ವೊಯೇಜ್ ಎಂಬ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ.

ಚೆನ್ನಯ್ಯನಕೋಟೆ ಮಖಾಂನಲ್ಲಿ ಹಂಝ ಸಅದಿಯವರ ಪ್ರಾರ್ಥನೆಯೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಹುಂಡಿ ಶಾಖೆಗೆ ಭೇಟಿ ನೀಡಲಾಯಿತು.

ಹುಂಡಿಯಲ್ಲಿ ಹಂಝ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷರಾದ ಝಬೈರ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಬ್ರಾಹಿಂ ಮಾಸ್ಟರ್ ಕೊಂಡAಗೇರಿ ಸಂಘಟನಾ ತರಗತಿಗೆ ನೇತೃತ್ವ ವಹಿಸಿ ಮಾತನಾಡಿದರು.

ಈ ಸಂದರ್ಭ ಎಸ್.ಎಸ್.ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಪೈನಾನ್ಸ್ ಕಾರ್ಯದರ್ಶಿ ಸಯ್ಯದ್ ಶಿಹಾಬ್, ಜೈನುದ್ದೀನ್, ಕೆಎಂಜೆ, ಎಸ್.ವೈ.ಎಸ್ ನಾಯಕರು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.