ಮಡಿಕೇರಿ, ಮಾ. ೧೮: ಬೆಂಗಳೂರಿನಲ್ಲಿ ನಕ್ಷತ್ರ ಫುಟ್ಬಾಲ್ ಅಕಾಡೆಮಿ ಸ್ಥಾಪಿಸಿ, ಮೂರು ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಫುಟ್ಬಾಲ್ ಕ್ಲಬ್ ಸ್ಥಾಪಿಸಿರುವ ಪಾಲಿಬೆಟ್ಟದ ಎಚ್.ಎಚ್ ಹರೀಶ್ ಸ್ಥಾಪಿತ ಯುನೈಟೆಡ್ ಎಫ್.ಸಿ ಕೊಡಗು ಮಹಿಳಾ ಫುಟ್ಬಾಲ್ ಕ್ಲಬ್ ಇದೀಗ ರಾಜ್ಯದ ಫುಟ್ಬಾಲ್ ಇತಿಹಾಸದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧೀನದಲ್ಲಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಷ್ಠಿತ ಫುಟ್ಬಾಲ್ ಲೀಗ್‌ಗಳಲ್ಲಿ ಒಂದಾಗಿರುವ "ಕರ್ನಾಟಕ ಸೂಪರ್ ಡಿವಿಷನ್" ಫುಟ್ಬಾಲ್ ಲೀಗ್‌ಗೆ ಅರ್ಹತೆ ಪಡೆದುಕೊಂಡಿದೆ.

ಇತ್ತೀಚಿಗೆ ಮುಕ್ತಾಯಗೊಂಡ "ಎ ಡಿವಿಷನ್" ಮಹಿಳಾ ಫುಟ್ಬಾಲ್ ಲೀಗ್‌ನಲ್ಲಿ ಯುನೈಟೆಡ್ ಎಫ್‌ಸಿ ಕೊಡಗು ತಂಡವು ಚಾಂಪಿಯನ್ ಪಟ್ಟವನ್ನು ಪಡೆದುಕೊಳ್ಳುವುದರ ಮೂಲಕ ಇದೇ ಮೊದಲ ಬಾರಿಗೆ ಸೂಪರ್ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದೆ.

೨೦೨೧ ರಲ್ಲಿ ಯುನೈಟೆಡ್ ಎಫ್.ಸಿ ಕೊಡಗು ತಂಡವು ಎ ಡಿವಿಷನ್ ಗೆ ಪದಾರ್ಪಣೆ ಮಾಡಿತು. ಕೊಡಗು ಜಿಲ್ಲೆಯಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಎ ಡಿವಿಷನ್ ಲೀಗ್‌ನಲ್ಲಿ ಆಡಿದ ಹೆಗ್ಗಳಿಕೆ ಕೂಡ ಯುನೈಟೆಡ್ ಎಫ್.ಸಿ ಕೊಡಗು ತಂಡಕ್ಕೆ ಸಲ್ಲುತ್ತದೆ. ಸತತ ಮೂರು ವರ್ಷಗಳ ನಿರಂತರವಾದ ಪ್ರಯತ್ನದಿಂದ ಯುನೈಟೆಡ್ ಎಫ್.ಸಿ ಕೊಡಗು ತಂಡವು ರಾಜ್ಯದ ಪ್ರತಿಷ್ಠಿತ ಸೂಪರ್ ಡಿವಿಷನ್ ಮಹಿಳಾ ಲೀಗ್ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿರುವುದು ಕ್ರೀಡಾ ತವರು ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ.

ಜಿಲ್ಲೆಯಲ್ಲಿ ‘ಲೋಕಲ್’ ಫುಟ್ಬಾಲ್ ಪಂದ್ಯಾವಳಿ ಆಡಿದರೆ ಜಿಲ್ಲೆಯ ಆಟಗಾರರು ಜಿಲ್ಲಾ ಮಟ್ಟಕ್ಕೆ ಮಾತ್ರ ಸೀಮಿತಗೊಳ್ಳುತ್ತಾರೆ. ಬೆಂಗಳೂರಿನಲ್ಲಿ ನಡೆಯುವ ಪ್ರತಿಷ್ಠಿತ ಕೆ.ಎಸ್.ಎಫ್.ಎ ಲೀಗ್‌ನಲ್ಲಿ ತಮ್ಮ ಪ್ರದರ್ಶನ ತೋರಿದರೆ ಮಾತ್ರ ರಾಜ್ಯದ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಹಾಗೂ ರಾಜ್ಯ, ರಾಷ್ಟç ತಂಡಕ್ಕೆ ಆಯ್ಕೆಯಾಗಲು ಸಾಧ್ಯ. ಬೆಂಗಳೂರಿನಲ್ಲಿ ನಕ್ಷತ್ರ ಅಕಾಡೆಮಿ ಸ್ಥಾಪನೆ ಮಾಡಿರುವ ಹರೀಶ್ ರಾಜ್ಯ ಮಟ್ಟದ ಯೂತ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಜಿಲ್ಲೆಯ ಯುವ ಫುಟ್ಬಾಲ್ ಪಟುಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕರ್ನಾಟಕ ರಾಜ್ಯದ ಯೂತ್ ಲೀಗ್‌ನಲ್ಲಿ ಸಂಪೂರ್ಣ ಕೊಡಗು ಆಟಗಾರರ ನ್ನೊಳಗೊಂಡ ತಂಡವನ್ನು ಕಟ್ಟಿ ಬೆಂಗಳೂರಿನಲ್ಲಿ ಯೂತ್ ಲೀಗ್‌ನಲ್ಲಿ ಆಡಲು ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರಿಗೆ ಹೆಚ್.ಹೆಚ್. ಹರೀಶ್ ಅವರು ಅವಕಾಶ ಮಾಡಿ ಕೊಡುತ್ತಿದ್ದಾರೆ. ೨೦೨೧ ರಲ್ಲಿ ಸ್ಥಾಪನೆಯಾದ ಯುನೈಟೆಡ್ ಎಫ್.ಸಿ ಕೊಡಗು ಮಹಿಳಾ ಫುಟ್ಬಾಲ್ ಕ್ಲಬ್ ಬೆಂಗಳೂರಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳ ಮಧ್ಯೆ ಬೆಳೆದು ಬಂದಿರುವುದು ಹೆಮ್ಮೆಯ ವಿಷಯವಾಗಿವೆ. ಕೊಡಗಿನಿಂದ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಸ್ವಂತ ತಂಡವನ್ನು ಕಟ್ಟಿ ತರಬೇತಿ ನೀಡಿ, ಭಾಗವಹಿಸುವುದು ಕಷ್ಟಸಾಧ್ಯ. ದೊಡ್ಡ ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಕೂಡ ಇದೆ. ಆದರೆ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಎಚ್.ಎಚ್ ಹರೀಶ್ ಅವರು ಯುನೈಟೆಡ್ ಎಫ್.ಸಿ ಕೊಡಗು ಮಹಿಳಾ ತಂಡವನ್ನು ಕಟ್ಟಿ ಬೆಂಗಳೂರಿನಲ್ಲಿ ಹೊಸ ಫುಟ್ಬಾಲ್ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಒಂದು ತಂಡಕ್ಕೆ ಮಾತ್ರ ಸೂಪರ್ ಡಿವಿಷನ್ ಅವಕಾಶ

ಎ ಡಿವಿಷನ್ ಮಹಿಳಾ ಫುಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡಕ್ಕೆ ಮಾತ್ರ ರಾಜ್ಯದ ಪ್ರತಿಷ್ಠಿತ ಕರ್ನಾಟಕ ಸೂಪರ್ ಡಿವಿಷನ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸೂಪರ್ ಡಿವಿಷನ್ ಲೀಗ್‌ನಲ್ಲಿ ಭಾಗವಹಿಸಲು ಕಠಿಣ ಪ್ರಯತ್ನ ನಡೆಸುತ್ತಿದ್ದ ಯುನೈಟೆಡ್ ಎಫ್.ಸಿ ಕೊಡಗು ತಂಡವು ಈ ಬಾರಿ ಎ ಡಿವಿಷನ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಬಾರಿಯ ಎ ಡಿವಿಷನ್ ಮಹಿಳಾ ಲೀಗ್‌ನಲ್ಲಿ ಯುನೈಟೆಡ್ ಎಫ್.ಸಿ ಕೊಡಗು ತಂಡ ಸೇರಿ ರಾಜ್ಯದ ಒಟ್ಟು ೦೬ ಕ್ಲಬ್‌ಗಳು ಭಾಗವಹಿಸಿದ್ದವು. ಯುನೈಟೆಡ್ ಎಫ್.ಸಿ ಕೊಡಗು ಮಹಿಳಾ ಫುಟ್ಬಾಲ್ ಕ್ಲಬ್ ತಂಡವು ಜಿ.ಆರ್.ಕೆ ಗರ್ಲ್ಸ್ ತಂಡದ ವಿರುದ್ಧ ೫-೦, ಟೆಕ್ನೋ ಫುಟ್ಬಾಲ್ ಫೆಡರೇಶನ್ ವಿರುದ್ಧ ೨-೦, ಕೆಂಪ್ ಎಫ್.ಸಿ ಜೂನಿಯರ್ಸ್ ವಿರುದ್ಧ ೨-೧, ಯಂಗ್ ಸ್ಟಾರ್ಸ್ ಎಫ್.ಸಿ ವಿರುದ್ಧ ೧೧-೦, ಲೆಜೆಂಡ್ಸ್ ದೀ ಸ್ಪೋರ್ಟಿಂಗ್ ಕ್ಲಬ್ ವಿರುದ್ಧ ೪-೦ ಹಾಗೂ ಲೀಗ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಪಾಸ್ ಎಫ್.ಸಿ ವಿರುದ್ಧ ಸಮಬಲ ಸಾಧಿಸುವುದರ ಮೂಲಕ ಲೀಗ್ ನಲ್ಲಿ ಸೋಲಿಲ್ಲದ ಸರದಾರನಾಗಿ ಹೊರಹೊಮ್ಮಿ ಇದೇ ವರ್ಷ ಅಕ್ಟೋಬರ್ ತಿಂಗಳಿನಿAದ ಡಿಸೆಂಬರ್ ತಿಂಗಳವರೆಗೆ ಬೆಂಗಳೂರಿನ ಕೆ.ಎಸ್.ಎಫ್.ಎ ಕ್ರೀಡಾಂಗಣದಲ್ಲಿ ನಡೆಯಲಿರುವ ಕರ್ನಾಟಕ ಸೂಪರ್ ಡಿವಿಷನ್ ಮಹಿಳಾ ಲೀಗ್‌ನಲ್ಲಿ ಭಾಗಹಿಸಲು ಅವಕಾಶ ಗಿಟ್ಟಿಸಿಕೊಂಡಿದೆ.

ನಿರೀಕ್ಷಿತ ಮಟ್ಟದಲ್ಲಿ ಸದುಪಯೋಗಪಡೆದುಕೊಳ್ಳುತ್ತಿಲ್ಲ

ಜಿಲ್ಲೆಯ ಮಹಿಳಾ ಫುಟ್ಬಾಲ್ ಆಟಗಾರ್ತಿಯರು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸದಿರುವುದು ಬೇಸರದ ಸಂಗತಿಯಾಗಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳದೆ ದೂರ ಉಳಿದಿದ್ದಾರೆ. ಜಿಲ್ಲೆಯ ಮಹಿಳಾ ಫುಟ್ಬಾಲ್ ಆಟಗಾರರಿಗೆ ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿ, ರಾಷ್ಟçಮಟ್ಟದ ಪ್ರತಿಷ್ಠಿತ ಫುಟ್ಬಾಲ್ ಅಕಾಡೆಮಿಗಳಿಗೆ ಆಯ್ಕೆಯಾಗಲು "ಎ" ಡಿವಿಷನ್ ಲೀಗ್ ಉತ್ತಮ ವೇದಿಕೆಯಾಗಿದೆ. ಯುನೈಟೆಡ್ ಎಫ್.ಸಿ ಕೊಡಗು ತಂಡದ ೧೮ ಆಟಗಾರರ ಪೈಕಿ ಕೊಡಗಿನ ನಾಲ್ವರು ಆಟಗಾರ್ತಿಯರು ಮಾತ್ರ ಸ್ಥಾನ ಪಡೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಉತ್ತಮ ಮಹಿಳಾ ಫುಟ್ಬಾಲ್ ಆಟಗಾರ್ತಿಯರು ಇದ್ದರೂ ಕೂಡ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ. ಕ್ಲಬ್‌ನಲ್ಲಿ ಕೊಡಗು ಜಿಲ್ಲೆಯ ಮಹಿಳಾ ಆಟಗಾರರಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ಮುಖ್ಯ ತರಬೇತುದಾರ ಹಾಗೂ ಸಂಸ್ಥಾಪಕ ಎಚ್.ಎಚ್ ಹರೀಶ್ ತಿಳಿಸಿದ್ದಾರೆ. ಕೊಡಗಿನ ಆಸಕ್ತ ಮಹಿಳಾ ಆಟಗಾರರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ೮೯೫೧೮೨೦೨೫೧

- ಕೆ.ಎಂ. ಇಸ್ಮಾಯಿಲ್ ಕಂಡಕರೆ