ಮಡಿಕೇರಿ, ಮಾ. ೧೭: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕೊಡಗು ಕೃಷಿ ವಿಜ್ಞಾನ ವೇದಿಕೆ ಮತ್ತು ಅರಣ್ಯ ಕಾಲೇಜಿನ ಸಹಯೋಗದಲ್ಲಿ ‘ಕಾರ್ಬನ್ ಕ್ರೆಡಿಟ್ - ಭವಿಷ್ಯ ಮತ್ತು ಅವಕಾಶಗಳ' ಕುರಿತ ಕಾರ್ಯಾಗಾರವನ್ನು ಇತ್ತೀಚೆಗೆ ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಜಿಲ್ಲೆಯ ರೈತರು ಮತ್ತು ಬೆಳೆಗಾರರು ಅಧಿಕ ಸಂಖ್ಯೆಯಲ್ಲಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿ ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಂಡರು.
ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಹಸಿರು ಹೊದಿಕೆ ಮತ್ತು ಅರಣ್ಯೀಕರಣವನ್ನು ಉತ್ತೇಜಿಸುವ ಸಲುವಾಗಿ ಬೇರೆಡೆ ಮರಗಳನ್ನು ನೆಡುವ ಮೂಲಕ ಅಥವಾ ಕೃಷಿ ಅರಣೀಕರಣದ ಮೂಲಕ ಕಾರ್ಬನ್ ಕ್ರೆಡಿಟ್ ಪಡೆದುಕೊಳ್ಳಬಹುದಾಗಿದೆ ಮತ್ತು ಇದರಿಂದ ಜಾಗತಿಕ ತಾಪಮಾನವನ್ನು ತಗ್ಗಿಸಲು ಕೊಡುಗೆ ನೀಡಬಹುದಾಗಿದೆ. ಕರ್ನಾಟಕದ ಕೊಡಗು ಜಿಲ್ಲೆಯ ಕಾವೇರಿ ನದಿ ತಟಪಾತ್ರದ ಭೂಮಿಯಲ್ಲಿ ಕಾಫಿ ಆಧಾರಿತ ಕೃಷಿ ಅರಣ್ಯ ವ್ಯವಸ್ಥೆಗಳಿಂದ ಕಾರ್ಬನ್ ಕ್ರೆಡಿಟ್ ಪಡೆಯುವ ಸಾಮರ್ಥ್ಯವನ್ನು ಪರಿಶೀಲಿಸು ವುದು ಅವಶ್ಯಕವಾಗಿರುತ್ತದೆ. ಪ್ರಕೃತಿಯ ರಕ್ಷಕರಾದ ರೈತರು ಮತ್ತು ಬೆಳೆಗಾರರಿಗೆ ಪ್ರಕೃತಿಯನ್ನು ಸಂರಕ್ಷಿಸಲು ಹಸಿರು ತೆರಿಗೆಯ ಮೂಲಕ ಪರಿಹಾರ ನೀಡಬೇಕು, ಈ ನಿಟ್ಟಿನಲ್ಲಿ ಪ್ರಸಕ್ತ ಕಾರ್ಯಾಗಾರವು ಜಿಲ್ಲೆಯ ರೈತರಿಗೆ ಮತ್ತು ಬೆಳೆಗಾರರಿಗೆ ಅವಶ್ಯಕ ಮಾಹಿತಿಯನ್ನು ಒದಗಿಸುವ ಪ್ರಯತ್ನ ಮಾಡಿತ್ತು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗದ ನಿವೃತ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಎ.ಎಸ್. ದೇವಕುಮಾರ್ ಅವರು ಆಗಮಿಸಿ ಕಾರ್ಬನ್ ಟ್ರೇಡಿಂಗ್ ವಿಷಯದ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೃಷಿ ಮತ್ತು ಅರಣ್ಯ ವಲಯದಲ್ಲಿ ಸ್ವಯಂಪ್ರೇರಿತ ಕಾರ್ಬನ್ ಮಾರುಕಟ್ಟೆಯ ಸ್ಥಿತಿ ಮತ್ತು ಕಾರ್ಯಸಾಧ್ಯತೆಯ ಕುರಿತು ಅರಣ್ಯ ಕಾಲೇಜಿನ ಕೃಷಿ ಅರಣ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಮAಜುನಾಥ ವಿಷಯ ಮಂಡಿಸಿದರು. ಅಧ್ಯಕ್ಷತೆಯನ್ನು ಅರಣ್ಯ ಕಾಲೇಜಿನ ಮುಖ್ಯಸ್ಥರಾದ (ಡೀನ್) ಡಾ. ಜಿ.ಎಂ. ದೇವಗಿರಿಯವರು ವಹಿಸಿದ್ದರು. ಸಿ.ಪಿ.ಎ, ಅಧ್ಯಕ್ಷರಾದ ಎ. ನಂದಾ ಬೆಳ್ಳಿಯಪ್ಪನವರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಿ.ಪಿ.ಎ., ಎ.ಎಸ್.ಎಪ್.ಕೆ. ಮತ್ತು ಅರಣ್ಯ ಕಾಲೇಜಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದವರಲ್ಲಿ ಹಿರಿಯ ಕಾಫಿ ಬೆಳೆಗಾರರಾದ ಕೂತಂಡ ಪಿ. ಉತ್ತಪ್ಪ, ನಂದಿನೆರವAಡ ಎಂ.ಅಪ್ಪ ಎ.ಎ.ಚಂಗಪ್ಪ, ಕೆ.ಕೆ. ವಿಶ್ವನಾಥ್, ಟಿ.ಎಂ. ಪೂವಯ್ಯ, ಕಾಫಿ ಮಂಡಳಿಯ ಮಾಜಿ ನಿರ್ದೇಶಕಿ ತಾರಾ ಅಯ್ಯಮ್ಮ, ಟಾಟಾ ಕಾಫಿ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಕೆ.ಜಿ.ರಾಜೀವ್ ಉಪಸ್ಥಿತರಿದ್ದರು. ಅರಣ್ಯ ಕಾಲೇಜಿನ ಅರಣ್ಯ ಉತ್ಪನ್ನಗಳು ಮತ್ತು ಬಳಕೆ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ಬಿ.ಎನ್. ಸತೀಶ್ ವಂದಿಸಿದರು.