ಸೋಮವಾರಪೇಟೆ, ಮಾ. ೧೭: ನಗರೋತ್ಥಾನ ಯೋಜನೆಯಡಿ ಕಳೆದ ಸಾಲಿನಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ೫ ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ಈವರೆಗೆ ಹಲವಷ್ಟು ಕಾಮಗಾರಿಗಳು ಪ್ರಾರಂಭವಾಗಿಲ್ಲ. ತಕ್ಷಣ ಕೆಲಸ ಆರಂಭಿಸದಿದ್ದರೆ ಪ.ಪಂ. ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.

ಕಳೆದ ಒಂದೂವರೆ ವರ್ಷದ ಹಿಂದೆಯೇ ಅಂದಿನ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು.

ಇಂದಿಗೂ ಹಲವಷ್ಟು ಕಾಮಗಾರಿ ಆರಂಭವಾಗಿಲ್ಲ. ಇದರೊಂದಿಗೆ ನಡೆದಿರುವ ಕಾಮಗಾರಿ ಸಮರ್ಪಕವಾಗಿಲ್ಲ. ಹಾಸನ ಜಿಲ್ಲೆಯ ಗುತ್ತಿಗೆದಾರರೊಬ್ಬರು ಈ ಕಾಮಗಾರಿಯ ಗುತ್ತಿಗೆ ಪಡೆದು, ಸೋಮವಾರಪೇಟೆಯ ಗುತ್ತಿಗೆದಾರನಿಗೆ ತುಂಡುಗುತ್ತಿಗೆ ನೀಡಿದ್ದಾರೆ. ಆದರೆ ಈತ ಸಮರ್ಪಕವಾಗಿ ಕಾಮಗಾರಿಯನ್ನು ನಡೆಸಿಲ್ಲ. ಅಲ್ಲದೆ ಪಟ್ಟಣದ ಹಲವು ವಾರ್ಡ್ಗಳಲ್ಲಿ ಇನ್ನೂ ಕಾಮಗಾರಿ ಆರಂಭಿಸಿಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಆರೋಪಿಸಿದರು.

ಕರ್ಕಳ್ಳಿ ಗ್ರಾಮದಲ್ಲಿ ಉದ್ಯಾನವನ ನಿರ್ಮಿಸುವ ನೆಪದಲ್ಲಿ ಕೆರೆಯನ್ನು ಕಸ ಕಡ್ಡಿಗಳಿಂದ ತುಂಬಿ ಇಡೀ ಊರಿನ ತ್ಯಾಜ್ಯವನು ಕೆರೆಗೆ ತುಂಬಿ ದುರ್ವಾಸನೆ ಬರುವಂತೆ ಮಾಡಲಾಗಿದೆ. ಜನತಾ ಕಾಲೋನಿ ರಸ್ತೆ ಕಾಮಗಾರಿಗಾಗಿ ಭೂಮಿ ಅಗೆದು ಹಾಕಿ ವರ್ಷವಾಗುತ್ತಾ ಬಂದರೂ ಕೆಲಸ ಆರಂಭಿಸಿಲ್ಲ. ಇಷ್ಟೆಲ್ಲಾ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳದಿರುವ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಅನುಮಾನಕ್ಕೆ ಕಾರಣವಾಗಿದೆ ಎಂದು ದೀಪಕ್ ಹೇಳಿದ್ದಾರೆ.

ಹಣ ವಿನಿಯೋಗವಾಗದೆ ಆರ್ಥಿಕ ವರ್ಷಾಂತ್ಯಕ್ಕೆ ಸರ್ಕಾರಕ್ಕೆ ವಾಪಾಸ್ಹೋಗುವ ಸಾಧ್ಯತೆ ಇದ್ದು, ಹಾಗೇನಾದರೂ ಆದರೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಜವಾಬ್ದಾರರಾಗಿರುತ್ತಾರೆ. ಒಂದೇ ಸಮಯದಲ್ಲಿ ಜಿಲ್ಲೆಯ ಕುಶಾಲನಗರ ಹಾಗೂ ವೀರಾಜಪೇಟೆ ಪಂಚಾಯಿತಿಗಳಿಗೆ ನೀಡಿದ ಅನುದಾನದಲ್ಲಿ ಈಗಾಗಲೇ ಕಾಮಗಾರಿ ಮುಗಿದು ಹಲವು ದಿನಗಳೇ ಆಗಿವೆ. ಮುಂದಿನ ಒಂದು ವಾರದೊಳಗೆ ಕಾಮಗಾರಿ ಆರಂಭಿಸಬೇಕು ಹಾಗೂ ಮಳೆಗಾಲದ ಒಳಗೆ ಮುಗಿಸಬೇಕು. ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಪಟ್ಟಣ ಪಂಚಾಯಿತಿ ಕಛೇರಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಸಂಬAಧಿತ ಮನವಿಯನ್ನು ತಾಲೂಕು ಕಚೇರಿ ಮತ್ತು ಪಟ್ಟಣ ಪಂಚಾಯಿತಿಗೆ ಸಲ್ಲಿಸಲಾಗಿದೆ. ಈ ಸಂದರ್ಭ ಕರವೇ ಪದಾಧಿಕಾರಿಗಳಾದ ಮಂಜುನಾಥ್, ಜಗನ್ನಾಥ್, ನಿತನ್ ಮಿಟ್ಟು, ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.