ಹೆಚ್.ಜೆ. ರಾಕೇಶ್
ಮಡಿಕೇರಿ, ಮಾ. ೧೫: ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ರಾಜಕಾರಣ ತಂತ್ರಗಾರಿಕೆ ಹೆಣೆಯುತ್ತಿವೆ. ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿ ಯದುವಂಶದ ಕುಡಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧೆ ತೀವ್ರ ಕೌತುಕವನ್ನೇ ಸೃಷ್ಟಿಸಿದೆ. ಮೈತ್ರಿ ಹಿನ್ನೆಲೆ ಜೆಡಿಎಸ್ ಕೊಡಗು-ಮೈಸೂರು ಲೋಕಸಭೆ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟ ಕಾರಣ ಕಾಂಗ್ರೆಸ್ ಮೈತ್ರಿ ಪಾಳಯವನ್ನು ಸದೆಬಡಿಯಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ.
ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸುತ್ತದೆ ಎಂಬ ವಿಶ್ಲೇಷಣೆ ಇದೀಗ ಸತ್ಯವಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕೈ ಪಾಳಯದ ಹುರಿಯಾಳು ಯಾರೆಂಬ ಪ್ರಶ್ನೆಗೆ ಉತ್ತರ ದೊರಕಲಿದೆ. ಆದರೆ, ರಾಜಕೀಯ ಪಡಸಾಲೆಯಲ್ಲಿ ಕೆಲವರ ಹೆಸರು ಓಡಾಡುತ್ತಿದ್ದು, ಆಕಾಂಕ್ಷಿಗಳು ಬಿ.ಫಾರಂ ತರಲು ಕೊನೆಗಳಿಗೆಯ ಯತ್ನಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ. ವರಿಷ್ಠರ ಗಮನ ಸೆಳೆಯುತ್ತಿರುವ ಸ್ಪರ್ಧಾಕಾಂಕ್ಷಿಗಳು ರಾಜ್ಯ ನಾಯಕರ ಮೇಲೂ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ವಕ್ತಾರ ಎಂ. ಲಕ್ಷö್ಮಣ, ಖ್ಯಾತ ವೈದ್ಯ ಡಾ. ಶುಶ್ರುತ ಗೌಡ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯ್ ಕುಮಾರ್ ಹೆಸರು ಮುನ್ನಲೆಯಲ್ಲಿ ಇರುವ ಹೊತ್ತಿಗೆ ಇದೀಗ ಮಾಜಿ ಮೇಯರ್, ಮಾಜಿ ಶಾಸಕ ದಿ. ವಾಸು ಅವರ ಮಗ ಕವೀಶ್ ಗೌಡ ಹೆಸರು ಪ್ರಬಲವಾಗಿ ಕೇಳಿಬರುತ್ತಿರುವುದು ಹೊಸ ಬೆಳವಣಿಗೆಗೆ ನಾಂದಿ ಹಾಡಿದೆ. ಈ ಮೂಲಕ ಯದುವೀರರ ರಾಜಕೀಯ ಪ್ರವೇಶದಿಂದ ಕಾಂಗ್ರೆಸ್ ತಂತ್ರಗಾರಿಕೆಯನ್ನು ಬದಲಾವಣೆ ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ ಎನ್ನಬಹುದಾಗಿದೆ.
ಒಕ್ಕಲಿಗ ದಾಳ ಪ್ರಯೋಗ?
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗ ಗೌಡ ಜನಾಂಗ ನಿರ್ಣಾಯಕ ಮತ ಹೊಂದಿರುವ ಹಿನ್ನೆಲೆ ಕಾಂಗ್ರೆಸ್ ಒಕ್ಕಲಿಗ ದಾಳ ಪ್ರಯೋಗಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಎಂ. ಲಕ್ಷö್ಮಣ್, ಶುಶ್ರುತ ಗೌಡ, ಡಾ. ವಿಜಯ್ ಕುಮಾರ್, ಕವೀಶ್ ಗೌಡ ಒಕ್ಕಲಿಗರಾಗಿದ್ದು, ಯತೀಂದ್ರ ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಳಿಕ ಉತ್ಸಾಹದಲ್ಲಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿಯೂ ಜಯಸಾಧಿಸುವ ವಿಶ್ವಾಸದಲ್ಲಿದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಗೆ ಈ ಕ್ಷೇತ್ರದ ಫಲಿತಾಂಶ ಪ್ರಾಮುಖ್ಯತೆ ಪಡೆದಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಸ್ಪರ್ಧೆ ಇಲ್ಲವೆಂದು ಸ್ವತಃ ಸಿದ್ದರಾಮಯ್ಯ ಸ್ಪಷ್ಟಪಡಿಸಿದರೂ ರಾಜಕಾರಣದ ಭಾಗವಾಗಿ ಅವರ ಹೆಸರು ಹೈಕಮಾಂಡ್ಗೆ ಹೋಗಿದೆ.
ಕವೀಶ್ ಯಾರು?
ಬಿಜೆಪಿಯಿಂದ ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕವೀಶ್ ಗೌಡ ಜೆಡಿಎಸ್ನ ಜಿ.ಟಿ. ದೇವೇಗೌಡರ ವಿರುದ್ಧ ೫೧,೩೧೮ ಮತಗಳನ್ನು ಪಡೆದು ಪರಭಾವಗೊಂಡಿದ್ದರು. ಅಪ್ಪ ವಾಸು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದರೂ, ಮಗ ಕವೀಶ್ ಬಿಜೆಪಿಯಿಂದ ಸ್ಪರ್ಧಿಸಿದ್ದು ಅಂದು ಚರ್ಚೆಗೆ ಗ್ರಾಸವಾಗಿತ್ತು.
ವಾಸು ಅಗಲಿಕೆಯ ನಂತರ ಕವೀಶ್ಗೆ ಕಾಂಗ್ರೆಸ್ನಿAದ ಟಿಕೆಟ್ ದೊರೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆ ಕವೀಶ್ ಮನವೊಲಿಸುವ ಯತ್ನಗಳು ವರಿಷ್ಠರಿಂದ ನಡೆಯುತ್ತಿವೆ ಎನ್ನಲಾಗಿದೆ. ಅಲ್ಲದೆ, ಅನುಕಂಪದ ಅಲೆಯೂ ಮತಗಳಾಗಿ ಪರಿವರ್ತನೆಯಾಗಬಹುದು ಎಂದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
ಇದರೊಂದಿಗೆ ಲಕ್ಷö್ಮಣ್, ಶುಶ್ರುತ, ವಿಜಯ್ ಕುಮಾರ್ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದು, ಸದ್ಯದಲ್ಲಿಯೇ ಮೈಸೂರು ಸಾಮಂತದ ದೊರೆ ಎದುರು ಸ್ಪರ್ಧಿಸಲು ಸಿದ್ಧವಾಗಿರುವ ಹುರಿಯಾಳು ಯಾರು? ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ.