ಚೆಯ್ಯಂಡಾಣೆ, ಮಾ. ೧೪: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ತೋಟಗಳಲ್ಲಿ ಬೀಡು ಬಿಟ್ಟಿದೆ.

ಕಳೆದ ಕೆಲವು ದಿನಗಳಿಂದ ಚೆಯ್ಯಂಡಾಣೆ ವ್ಯಾಪ್ತಿಯ ನರಿಯಂದಡ ಹಾಗೂ ಬಾವಲಿ ಗ್ರಾಮದ ತೋಟಗಳಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಹಾನಿಪಡಿಸುತ್ತಿದೆ.

ಬಾವಲಿ ಗ್ರಾಮದ ಬಿದ್ದಂಡ ಚಿಣ್ಣಪ್ಪ (ದೀಕ್ಷಿತ್), ನರಿಯಂದಡ ಗ್ರಾಮದ ತೊಟಂಬೈಲು ಅನಂತ್ ಕುಮಾರ್, ಪವನ್ ಹಾಗೂ ತೊಟಂಬೈಲು ಐನ್ ಮನೆ, ಪೊಕ್ಕುಳಂಡ್ರ ಕುಟುಂಬಸ್ಥರ ತೋಟಗಳಿಗೆ ಲಗ್ಗೆ ಇಟ್ಟ ೩ ಕಾಡಾನೆಗಳ ಹಿಂಡು ಕಾಫಿ, ಅಡಿಕೆ, ಬಾಳೆ, ಕರಿಮೆಣಸು ಗಿಡಗಳನ್ನು ತುಳಿದು ನಾಶಪಡಿಸಿದೆ.

ನಿನ್ನೆ ಬೆಳಿಗ್ಗೆ ಬಾವಲಿ ಗ್ರಾಮದ ತೋಟಕ್ಕೆ ತೆರಳಿದ ಚಿಣ್ಣಪ್ಪ ಎದುರಿನಿಂದ ಕಾಡಾನೆ ಹಿಂಡನ್ನು ಕಂಡು ಭಯ ಭೀತರಾಗಿದ್ದಾರೆ, ನಂತರ ಕಾಡಾನೆ ಹಿಂಡು ತೋಟಗಳಲ್ಲಿ ಸುಳಿದಾಡಿ ಅಪಾರ ಪ್ರಮಾಣದ ಹಾನಿಪಡಿಸಿದೆ.

ಕೂಡಲೇ ಅರಣ್ಯ ಇಲಾಖೆ ಕಾಡಾನೆಯನ್ನು ತೋಟಗಳಿಗೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ, ತೋಟಗಳಲ್ಲಿ ಕಾಫಿ, ಮೆಣಸು ಕುಯ್ಯುವ ಹಾಗೂ ಗಿಡಗಳಿಗೆ ನೀರು ಹಾಯಿಸುವ ಈ ಸಮಯದಲ್ಲೂ ಕಾಡಾನೆ ದಾಳಿ ಇಡುತ್ತಿದ್ದು, ಕಾರ್ಮಿಕರು, ರೈತರು ತೋಟಗಳಿಗೆ ತೆರಳುತಿಲ್ಲ, ಜೀವ ಬಲಿ ಪಡೆಯುವ ಮುನ್ನ ಎಚ್ಚೆತ್ತು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮದ ಮುಖಾಂತರ ತೋಡಿ ಕೊಂಡಿದ್ದಾರೆ.

ಅರಣ್ಯ ಇಲಾಖೆ ಕೂಡಲೇ ಕಾಡಾನೆ ತೋಟಗಳಿಗೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು, ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು, ನಷ್ಟ ಅನುಭವಿಸಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. - ಅಶ್ರಫ್